Thursday, August 18, 2011

ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ..


ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ ಉದ್ದೇಶ. ಆದರೆ ಇವತ್ತು ಒಂದು ಕಟಿಂಗ್ ಶಾಪಿಗೆ ಹೋಗಿದ್ದೆ. ಅಲ್ಲಿ ಟಿವಿಯೇನೋ ಇತ್ತು ಆದರೆ ಅದು ಆನ್ ಆಗಿರಲಿಲ್ಲ. ಯಾಕೆ ಇವತ್ತು ಟಿವಿ ಆನ್ ಮಾಡಿಲ್ಲ ಅಂತ ಕೇಳಿದೆ. ಅದಕ್ಕೆ ಅಂಗಡಿಯ ಮಾಲೀಕರು ಕೊಟ್ಟ ಉತ್ತರ ಅದ್ಭುತವಾಗಿತ್ತು. ಅದನ್ನು ಅವರ ಮಾತಿನಲ್ಲಿಯೇ ಕೇಳಿ..

ಏನ್ಮಾಡೋದು ಸಾರ್, ಯಾವ್ದೂ ಸರಿಯಾದ ಚಾನಲ್ಲುಗಳೇ ಇಲ್ಲ. ಹಾಡಿನ ಚಾನಲ್ ಹಾಕೋಣ ಅಂದ್ರೆ ಈಗಿನ ಸಿನಿಮಾ ಹಾಡುಗಳು ನೋಡುವುದಿರಲಿ, ಕಣ್ಣುಮುಚ್ಚಿಕೊಂಡರೂ ಕೇಳುವುದಕ್ಕೆ ಆಗದಿರುವಷ್ಟು ಅಸಹ್ಯವಾಗಿರುತ್ತೆ. ನ್ಯೂಸ್ ಚಾನಲ್ ಹಾಕಿದ್ರೆ ಅದ್ರಲ್ಲಿ ಬರೀ ರಾಜಕೀಯನೇ ಬರುತ್ತೆ. ನಮ್ಮ ಶಾಪಿಗೆ ಬರೀ ಒಂದೇ ಪಾರ್ಟಿಯ ಜನ ಬರುವುದಿಲ್ಲವಲ್ಲ. ಟಿವಿಯಲ್ಲಿ ಬರುವ ರಾಜಕೀಯ ಸುದ್ದಿಗಳನ್ನು ನೋಡಿ ಶುರುವಾಗುವ ಅವರ ಚರ್ಚೆ, ಕೊನೆಕೊನೆಗೆ ಜಗಳದ ವರೆಗೂ ಹೋಗುತ್ತದೆ. ನಮ್ಮ ಅಂಗಡಿಗೆ ಬಂದು ಯಾವುದೋ ಕೆಲಸಕ್ಕೆ ಬಾರದ ವಿಷಯಕ್ಕೆ ಜಗಳ ಆಡ್ತಾರಲ್ಲಾ ಅಂತ ಬೇಜಾರಾಗುತ್ತೆ. ಇನ್ನು ಸಿನಿಮಾ ಹಾಕಿದ್ರೆ ಅದರದ್ದು ಇನ್ನೊಂದು ತೊಂದರೆ. ಸಿನಿಮಾ ಚೆನ್ನಾಗಿದ್ರೆ ಜನ ಕಟಿಂಗ್ ಆದ್ಮೇಲೂ ನೋಡ್ತಾ ಕೂರ್ತಾರೆ. ಇದರಿಂದ ಉಳಿದ ಗಿರಾಕಿಗಳು ಬಂದು ರಷ್ ಇದೆ ಅಂತ ವಾಪಾಸ್ ಹೋಗ್ತಾರೆ. ನಮಗೆ ತುಂಬಾ ಲಾಸ್ ಆಗುತ್ತೆ. ಅದಕ್ಕೇ ಈಗ ಟಿವಿ ಹಾಕೋದನ್ನೇ ಬಿಟ್ಟಿದ್ದೀನಿ. ಜನಗಳು ಒಂದು ಅರ್ಧ ಗಂಟೆನಾದ್ರೂ ನೆಮ್ಮದಿಯಿಂದ ಕೂರಲಿ. ಜೊತೆಗೆ ನನಗೆ ಕರೆಂಟ್ ಬಿಲ್ಲೂ ಉಳಿಯುತ್ತೆ, ಏನಂತೀರಿ?”

ಅವ್ರ ಮಾತು ನೂರಕ್ಕೆ ನೂರು ಸತ್ಯ ಅಂದುಕೊಂಡು ಅಲ್ಲೇ ಇದ್ದ ನ್ಯೂಸ್ ಪೇಪರ್ ತೆಗೆದುಕೊಂಡೆ. ಆಮೇಲೆ ಬೇಡ ಎನ್ನಿಸಿ ಅಲ್ಲೇ ಇಟ್ಟೆ...

4 Comments:

Aravinda said...

>> ಅವ್ರ ಮಾತು ನೂರಕ್ಕೆ ನೂರು ಸತ್ಯ ಅಂದುಕೊಂಡು ಅಲ್ಲೇ ಇದ್ದ ನ್ಯೂಸ್ ಪೇಪರ್ ತೆಗೆದುಕೊಂಡೆ. ಆಮೇಲೆ ಬೇಡ ಎನ್ನಿಸಿ ಅಲ್ಲೇ ಇಟ್ಟೆ...
ಪೇಪರ್ ಓದ್ಬೋದಿತ್ತು ಅನ್ನಿಸುತ್ತೆ :)

ಸುಬ್ರಮಣ್ಯ said...

ಇಲ್ಲೆಲ್ಲಾ ಎಫ್.ಎಂ. ಕಿರುಚುತ್ತಿರುತ್ತೆ!!!

Prasanna S P said...

@Aravinda ಪೇಪರಲ್ಲೂ ರಾಜಕೀಯನೇ ತಾನೇ ಇರೋದು. ಅದಕ್ಕೇ ಪೇಪರ್ ಹಾಗೆಯೇ ಇಟ್ಟೆ.. :-)

Prasanna S P said...

@ಸುಬ್ರಮಣ್ಯ ಮಾಚಿಕೊಪ್ಪ, ಎಫ್.ಎಂ.ರೇಡಿಯೋ ಸ್ವಲ್ಪ ವಾಸಿ, ಟಿವಿ ಇದ್ರೆ ಅದನ್ನು ನೋಡುತ್ತಾ ಕಟಿಂಗ್ ಮಾಡ್ತಾರೆ. ಗಮನವೆಲ್ಲಾ ಅದರ ಮೇಲೇ ಇರುತ್ತೆ.

Post a Comment