Sunday, December 26, 2010

ನಮಗೆ ಚಳಿ ಆದಾಗ, ಸ್ವೆಟರ್‍ ಧರಿಸಿದರೆ ಬಚ್ಚನೆಯ ಅನುಭವ ಏಕೆ ಆಗುತ್ತದೆ?

(ಇದು ಕಿಂದರಜೋಗಿಗೆಂದು ಬರೆದ ಲೇಖನ. ಕಿಂದರಜೋಗಿಯಲ್ಲಿ ಈ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.)

ಈಗ ಚಳಿಗಾಲ ಅಲ್ವಾ? ನಮಗೆ ಚಳಿ ಆದಾಗ ನಾವು ಬೆಚ್ಚಗಿರಲು ಸ್ವೆಟರ್‍ ಹಾಕಿಕೊಳ್ಳುತ್ತೇವೆ. ಆದರೆ ನಮಗೇಕೆ ಚಳಿ ಆಗುತ್ತದೆ? ಸ್ವೆಟರ್‍ ಧರಿಸಿದಾಗ ಏಕೆ ಚಳಿ ಕಡಿಮೆಯಾಗುತ್ತದೆ? ಈ ಬಗ್ಗೆ ಸ್ವಲ್ಪ ಯೋಚನೆ ಮಾಡೋಣವೇ?

ಅದಕ್ಕೂ ಮೊದಲು ಒಂದು ಸಣ್ಣ ವಿಷಯವನ್ನು ತಿಳಿದುಕೊಳ್ಳೋಣ, ಉಷ್ಣವು (heat) ಯಾವಾಗಲೂ ಹೆಚ್ಚು ಉಷ್ಣಾಂಶ ಅಥವಾ ತಾಪಮಾನದ (temperature) ಪ್ರದೇಶದಿಂದ ಕಡಿಮೆ ಉಷ್ಣಾಂಶದ ಕಡೆಗೆ ಹರಿಯುತ್ತದೆ. ಉದಾಹರಣೆಗೆ ಬಿಸಿ ನೀರಿಗೆ ತಣ್ಣೀರನ್ನು ಸೇರಿಸಿದಾಗ ಬಿಸಿನೀರಿನಲ್ಲಿರುವ ಉಷ್ಣವು ತಣ್ಣೀರಿಗೆ ವರ್ಗಾವಣೆಯಾಗುತ್ತದೆ. ಹಾಗಾಗಿ ಬಿಸಿನೀರು ಸ್ವಲ್ಪ ತಣ್ಣಗಾಗುತ್ತದೆ. ನಮಗೆ ಚಳಿ ಆಗುವಾಗಲೂ ಇದೇ ನಿಯಮ ಅನ್ವಯಿಸುತ್ತದೆ. ವಾತಾವರಣದಲ್ಲಿ ತಾಪಮಾನವು (temperature) ನಮ್ಮ ದೇಹದ ತಾಪಮಾನಕ್ಕಿಂತ ಕಡಿಮೆಯಾದಾಗ, ನಮ್ಮ ದೇಹದಿಂದ ಉಷ್ಣವು (heat) ವಾತಾವರಣಕ್ಕೆ ಹರಿಯುತ್ತದೆ. ಆಗ ನಮ್ಮ ದೇಹವು ಉಷ್ಣವನ್ನು ಕಳೆದುಕೊಳ್ಳುವುದರಿಂದ ನಮಗೆ ಚಳಿಯ ಅನುಭವವಾಗುತ್ತದೆ.

ಈಗ ಸ್ವೆಟರ್‍ ಹಾಕಿಕೊಂಡಾಗ ನಮಗೆ ಏಕೆ ಬೆಚ್ಚನೆ ಅನುಭವವಾಗುತ್ತದೆ ಎಂದು ನೋಡೋಣ. ಸ್ವೆಟರ್‌ನಲ್ಲಿ ಬಳಸುವ ಉಣ್ಣೆ (wool) ಇದೆಯಲ್ಲ, ಅದು ಉಷ್ಣದ ಅವಾಹಕ (bad conductor of heat). ಹಾಗಾಗಿ ಅದು ದೇಹದಿಂದ ಉಷ್ಣವು ಹೊರಗೆ ಹೋಗದಂತೆ ತಡೆಯುತ್ತದೆ. ಅದರಿಂದ ನಮಗೆ ಬೆಚ್ಚನೆಯ ಅನುಭವವಾಗುತ್ತದೆ. ಅದೂ ಅಲ್ಲದೆ ನಾವು ಬ್ಲಾಂಕೆಟ್‌ಗಳನ್ನು ಧರಿಸಿದಾಗ, ನಮ್ಮ ದೇಹ ಮತ್ತು ಬ್ಲಾಂಕೆಟ್‌ನ ನಡುವೆ ಗಾಳಿ ಇರುತ್ತದೆಯಲ್ಲ, ಅದೂ ಕೂಡ ಉಷ್ಣದ ಅವಾಹಕ. ಆ ಗಾಳಿಯೂ ಕೂಡ ಉಷ್ಣವು ನಮ್ಮ ದೇಹದಿಂದ ಹೊರಗೆ ಹೋಗದಂತೆ ತಡೆಯುತ್ತದೆ. ಇದೆಲ್ಲಾ ಕಾರಣಗಳಿಂದ ಚಳಿಗಾಲದಲ್ಲಿ ಸ್ವೆಟರ್‍ ಧರಿಸಿದಾಗ ನಮಗೆ ಬೆಚ್ಚನೆಯ ಅನುಭವವಾಗುತ್ತದೆ.

ಇದೇ ತತ್ವವು ಬೇರೆ ಕಡೆಯೂ ಅನ್ವಯವಾಗುತ್ತದೆ. ಉದಾಹರಣೆಗೆ ನಾವು ಐಸ್‌ ಕ್ರೀಂ ತಿಂದಾಗ ನಮ್ಮ ನಾಲಿಗೆಯಿಂದ ಐಸ್‌ ಕ್ರೀಂಗೆ ಉಷ್ಣವು ಹರಿಯುತ್ತದೆ. ನಮ್ಮ ನಾಲಿಗೆಯು ಉಷ್ಣವನ್ನು ಕಳೆದುಕೊಂಡಾಗ ತಣ್ಣನೆಯ ಅನುಭವವಾಗುತ್ತದೆ.


ಧನ್ಯವಾದಗಳು,
-ಪ್ರಸನ್ನ.ಎಸ್.ಪಿ

Wednesday, December 22, 2010

ಮಲೆನಾಡಿನ factಗಳು... ಭಾಗ-1

ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ,

1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ ಚೀಲದಲ್ಲಿ ಕೋಳಿ ಕೂಗ್ತಿದೆ ಅಂದ್ರೆ, ಅವತ್ತು ಭಟ್ರ ಮನೇಲಿ ಹರಕೆ ಇದೆ ಅಂತ ಅರ್ಥ!

2. ದೀಪಾವಳಿ ಬಿಟ್ಟು ಬೇರೆ ಟೈಮಲ್ಲಿ ಪಟಾಕಿ ಅಥ್ವಾ ಈಡಿನ ಸೌಂಡು ಕೇಳ್ತು ಅಂದ್ರೆ, ಯಾರೋ ಹೊಗೆ ಹಾಕಿಸ್ಕೊಂಡಿದಾರೆ ಅಂತ ಅರ್ಥ!

3. ಮನೇಲಿ ನೆಲದ ಮೇಲೆ ರಕ್ತದ ಕಲೆ ಆಗಿದೆ ಅಂದ್ರೆ, ಯಾರೋ ತೋಟದಿಂದ ಇಂಬ್ಳ ಹತ್ತಿಸ್ಕೊಂಡು ಬಂದಿದಾರೆ ಅಂತ ಅರ್ಥ!

4. ಯಾರ್ದಾದ್ರೂ ಮನೇಲಿ ಹುರುಳಿ ಸಾರು ಆಗಿದೆ ಅಂದ್ರೆ, ಹೂಟೆ ಶುರುವಾಯ್ತು ಅಂತ ಅರ್ಥ!

5. ಯಾವ್ದಾದ್ರೂ ರಸ್ತೆ ರಿಪೇರಿ ಆಗ್ತಿದೆ ಅಂದ್ರೆ, "ಎಲೆಕ್ಷನ್" ಬಂತು ಅಂತ ಅರ್ಥ!

6. ಸಿಡಿಲು ಬಂತು ಅಂದ್ರೆ, ಎರಡು ದಿನ ಫೋನು ಸತ್ತು ಹೋಯ್ತು ಅಂತ ಅರ್ಥ!

ಮುಂದುವರೆಯುವುದು...

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Tuesday, December 21, 2010

ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?

ನಮ್ಮ ಜೀವಶಾಸ್ತ್ರದ ಮೇಷ್ಟ್ರು ಒಂದು ಸಲ ಇದ್ದಕ್ಕಿದ್ದಂತೆ "ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?" ಅಂತ ಕೇಳಿದರು. ಬಸ್ಸು, ಲಾರಿಯಲ್ಲಿ ಬರುವ ಉತ್ಸರ್ಜಿತ ಹೊಗೆ (exhaust gas) ಇಂಗಾಲದ ಡೈ ಆಕ್ಸೈಡ್ (ಕಾರ್ಬನ್ ಡೈ ಆಕ್ಸೈಡ್) ಅಲ್ವಾ, ಅದು ಕಪ್ಪು ಬಣ್ಣ ಇರುತ್ತೆ. ಹಾಗಾಗಿ ಇಂಗಾಲದ ಡೈ ಆಕ್ಸೈಡ್ ಬಣ್ಣ ಕಪ್ಪು ಎಂದು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ "ಕಪ್ಪು" ಅಂತ ಕೂಗಿದ್ವಿ. ತಕ್ಷಣ ಅವರು , " ಹಾಗಾದರೆ ನಾವು ಉಸಿರು ಬಿಟ್ಟಾಗ ಮೂಗಿಂದ ಇಂಗಾಲದ ಡೈ ಆಕ್ಸೈಡ್ ಅನಿಲ ಹೊರಬರುತ್ತಲ್ಲ, ಅದು ಸಿಗರೇಟ್ ಹೊಗೆ ತರಹ ಕಪ್ಪಗೆ ಇರಬೇಕಿತ್ತು. ಏಕಿಲ್ಲ?" ಎಂದು ಕೇಳಿದರು. ಆಗ ನಾವು ಹೇಳಿದ್ದು ತಪ್ಪು ಉತ್ತರ ಎಂದು ಗೊತ್ತಾದರೂ, ಮೂಗಿಂದ ಕಪ್ಪು ಹೊಗೆ ಬರುವುದನ್ನು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ ನಕ್ಕಿದೆವು. :-)

Tuesday, December 14, 2010

ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸ್ ಜಾಹೀರಾತು!

ಇವತ್ತು ಹಾಗೇ ಲಿನಕ್ಸಿನ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಣ ಎಂದು ಗೂಗಲ್‌ನಲ್ಲಿ ಹುಡುಕುತ್ತಿದ್ದೆ. ಹಾಗೆಯೇ ಲಿನಕ್ಸಿನ ಅಧಿಕೃತ ವೆಬ್ಸೈಟನ್ನೂ ತೆಗೆದೆ. ಅದರಲ್ಲಿ ನೋಡಿದರೆ ಒಂದು ಆಶ್ಚರ್ಯ ಕಾದಿತ್ತು. ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸಿನ ಜಾಹೀರಾತು! ದುಡ್ಡು ಕೊಟ್ಟು ಕೊಳ್ಳುವ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಪ್ರಮುಖ ಸ್ವತಂತ್ರ ತಂತ್ರಾಂಶವಾದ ಲಿನಕ್ಸಿನ ಅಧಿಕೃತ (http://linux.org) ತಾಣದಲ್ಲಿ ಅದೇ ದುಡ್ಡು ಕೊಟ್ಟು ಕೊಳ್ಳುವ ವಿಂಡೋಸಿನ ಜಾಹೀರಾತು. ಅದೂ ಅಲ್ಲದೇ ವಿಂಡೋಸ್7ನ ವರ್ಣನೆ ಬೇರೆ! ಎಂತಹಾ ವಿಪರ್ಯಾಸ ಅಲ್ಲವೇ?

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)