Wednesday, May 2, 2012

ಬಿದಿರಕ್ಕಿ

ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್ಕಿಯನ್ನು ನೋಡಿದ್ದು. ಆಗ ಅಜ್ಜ ಅದರ ಬಗ್ಗೆ ಹೇಳುತ್ತಿದ್ದುದು ನೆನಪಾಯಿತು. "ಬಿದಿರು ಅಕ್ಕಿ ಬಿಡುವುದು ತುಂಬಾ ಅಪರೂಪ. ಹಾಗೊಂದು ವೇಳೆ ಬಿದಿರಕ್ಕಿ ಬಿಟ್ಟರೆ ಆ ವರ್ಷ ಬರಗಾಲ ಬರಲಿದೆ ಎಂದರ್ಥ." ಈ ವರ್ಷ ಬಿದಿರಕ್ಕಿಯೂ ಬಿಟ್ಟಿದೆ, ಬರಗಾಲವೂ ಬಂದಿದೆ. ಎಂತಹಾ ಕಾಕತಾಳೀಯ / ಪ್ರಕೃತಿ ವಿಸ್ಮಯವಲ್ಲವೇ?

ಅವತ್ತು ಜೊತೆಗೆ ಕ್ಯಾಮೆರಾವನ್ನೂ ತೆಗೆದುಕೊಂಡು ಹೋಗಿದ್ದೆ. ಹಾಗಾಗಿ ಅಪರೂಪ(?)ದ "ಬಿದಿರಕ್ಕಿ"ಯ ಚಿತ್ರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಅಂದ ಹಾಗೆ, ಇದರಿಂದ ಅನ್ನ ತಯಾರಿಸಿ ಊಟ ಕೂಡ ಮಾಡುತ್ತಾರಂತೆ. ರುಚಿಯಾಗಿಯೂ ಇರುತ್ತಂತೆ. ಆದರೆ ಬಹಳ ಉಷ್ಣ ಎಂದು ಕೇಳಿದ್ದೇನೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಯಾರ ಬಳಿಯಲ್ಲಾದರೂ ಇದ್ದರೆ ತಿಳಿಸಿ.

2 Comments:

ಭಾವಜೀವಿ... said...

ನಾನೂ ಈ ಬಾರಿ ಊರಿಗೆ ಹೋದಾಗ, ರಾಶಿ ರಾಶಿ ಬಿದ್ದಿದ್ದ ಬಿದಿರಕ್ಕಿಯನ್ನು ದನ ಎಮ್ಮೆಗಳು ಮೆಲ್ಲುತ್ತಿರುವುದನ್ನು ನೋಡಿದೆ!
ಬಿದರಕ್ಕಿ ಕಾಣಿಸಿಕೊಂಡ ಕೆಲವೆ ವರ್ಷಗಳಲ್ಲಿ ಆ ಬಿದಿರು ಮೆಳೆ ಸತ್ತು ಹೋಗುತ್ತದೆ. ಬಿದರಕ್ಕಿ ಒಂದು ಸಾಮೂಹಿಕ ಪ್ರಕ್ರಿಯೆಯಾದ್ದರಿಂದ, ಸರಿ ಸುಮಾರು ಒಂದೇ ಅವಧಿಯಲ್ಲಿ ಎಲ್ಲಾ ಬಿದಿರು ನಾಶಗೊಂಡು ಮತ್ತೆ ಹೊಸದಾಗಿ ಚಿಗುರುತ್ತದೆ. ಇದರ ಆಯಸ್ಸು ೪೦-೮೦ ವರ್ಷವಾಗಿರುತ್ತದೆ.

ಬಿದಿರಕ್ಕಿ ಕಾಣಿಸಕೊಂಡಾಗ, ಅದನ್ನು ತಿಂದ ಹೆಗ್ಗಣಗಳ ಸಂತತಿ ಯಥೇಚ್ಛವಾಗಿ ಬೆಳೆಯುತ್ತದೆ. ಇದು ಖಾಲಿಯಾದ ನಂತರ ಜನರು ಕೂಡಿಟ್ಟ ಉಗ್ರಾಣಗಳಿಗೆ ಧಾಳಿ ನೀಡುತ್ತವೆ, ಬಹುಷಃ ಇದೆ ಬರಗಾಲದಂತಹ ಪರಿಸ್ಥಿತಿ ಕಾರಣವಾಗಬಹುದು ಎಂದು ಎಲ್ಲೋ ಕೇಳಿದ ನೆನಪು.

Vishku said...

Namaskara
kannada blog nodi kushi aythu... Bidirakki nodirlilla nimminda nodidante aythu...

Bhavajeevi yavre nivu heliddu sari irbeku kaadu nodona..

Post a Comment