Showing posts with label ಪದ್ಯ. Show all posts
Showing posts with label ಪದ್ಯ. Show all posts

Saturday, October 22, 2011

ಪದ್ಯ: ಗುಬ್ಬಿ


(ಹಾಡನ್ನು ಕೇಳಲು ಮೇಲೆ Play ಬಟನ್ ಒತ್ತಿ. ವಾಲ್ಯುಮ್ ಸ್ವಲ್ಪ ಜೋರಾಗಿ ಇಡಿ)

ಗುಬ್ಬಿಯೊಂದು
ಹಾರಿಬಂದು
ಮನೆಯ ಮೇಲೆ ಕುಳಿತಿತು ||೧||

ಅತ್ತ ಇತ್ತ
ಸುತ್ತ ಮುತ್ತ
ಕತ್ತುತಿರುಗಿ ನೋಡಿತು ||೨||

ಚೀಂವ್ ಚೀಂವ್
ಚೀಂವ್ ಎಂದು
ಚೆಂದದಿಂದ ಹಾಡಿತು ||೩||

ಅದನು ಕಂಡು
ಪುಟ್ಟ ಪಾಪ
ಅಲ್ಲೆ ನೋಡಿ ನಿಂತಿತು ||೪||

(ಬರೆದವರು ಯಾರು ಅಂತ ಗೊತ್ತಿಲ್ಲ. ಶಾಲೆಯಲ್ಲಿ ಹೇಳಿಕೊಟ್ಟಿದ್ದು.. ಹಾಡಿರುವುದು ಶ್ರೀದೇವಿ)
(ಇದು ಅಂತಃಸ್ಫುರಣದಲ್ಲಿ ನೂರನೆಯ ಬರಹ!!)

Thursday, January 13, 2011

ನನ್ನ ನವಿಲು



 ನನ್ನ ನವಿಲೆ ನನ್ನ ನವಿಲೆ
    ಬಾರೆ ಇಲ್ಲಿಗೆ

ಅಂಕು ಡೊಂಕು ಹೆಜ್ಜೆ ಹಾಕಿ
    ಹೊರಟೆ ಎಲ್ಲಿಗೆ?

ನಿನ್ನ ದನಿಯು ಎಷ್ಟು ಮಧುರ
    ಏನು ಹೇಳಲಿ!

ನಿನ್ನ ರೂಪ ಎನಿತು ಚೆಂದ
    ಹೇಗೆ ಹೊಗಳಲಿ!

ಹಲವು ಬಗೆಯ ಬಣ್ಣದಿಂದ
    ನಿನ್ನ ಗರಿಗಳು

ಮುತ್ತು ರತ್ನ ಹವಳದಂತೆ
    ಹೊಳೆಯುತಿರುವುವು
   
ನಿನ್ನ ಕಣ್ಣ ರೇಖೆ ಚೆನ್ನ
    ಚಿನ್ನದುಂಗುರ

ತಲೆಯ ಮೇಲೆ ತೆನೆ-ತುರಾಯಿ
    ಬಹಳ ಸುಂದರ

ಮೇಘಮಾಲೆ ತಿರುಗುತಿರಲು
    ಕೇಕೆ ಹಾಕುವೆ

ಮಣಿದು ಕುಣಿದು ಹರುಷದಿಂದ
    ಹಾಡ ಹಾಡುವೆ

ನಿನಗೆ ತಿನಲು ಕಾಳ ಕೊಡುವೆ
    ಬಾರೆ ಇಲ್ಲಿಗೆ

ಪ್ರೀತಿಯಿಂದ ಮುದ್ದನೊಂದ
    ಕೊಡುವೆ ಮೆಲ್ಲಗೆ

ನಿನಗೆ ಅಂದ ಚೆಂದದೊಂದು
    ಮನೆಯ ಕಟ್ಟುವೆ

ಪ್ರೇಮದಿಂದ ನಿನ್ನ ನಾನು
    ಸಾಕಿ ಸಲಹುವೆ

ನನ್ನ ನವಿಲೆ ನನ್ನ ನವಿಲೆ
    ಬಾರೆ ಇಲ್ಲಿಗೆ

ಅಂಕು ಡೊಂಕು ಹೆಜ್ಜೆ ಹಾಕಿ
    ಹೊರಟೆ ಎಲ್ಲಿಗೆ?

-ಅಣ್ಣಾರಾಯ ಸಾಲಿಮನಿ

 ಚಿತ್ರ ಬಿಡಿಸಿದ್ದು: ಪ್ರಸನ್ನ ಶಂಕರಪುರ

ಪದ್ಯ ಚೆಂದ ಇದೆ ಅಲ್ವಾ? ಬರೆದಿದ್ದು ಅಣ್ಣಾರಾಯ ಸಾಲಿಮನಿ ಅವರು. ಈ ಪದ್ಯ ನನಗೆ ಒಂದನೇ ತರಗತಿಯಲ್ಲಿತ್ತು. ಆಗ ನನಗಿದು ಅತ್ಯಂತ ಇಷ್ಟದ ಪದ್ಯವಾಗಿತ್ತು. ಆದರೆ ಓದಿ ಸುಮಾರು ವರ್ಷ ಆಯ್ತು ಅಲ್ವಾ? ಅದಕ್ಕೇ ಈಗ ಕೊನೆಯ ಕೆಲವು ಸಾಲುಗಳು ಮರೆತೇ ಹೋಗಿತ್ತು. ಮೊನ್ನೆ ಏನೋ ಹುಡುಕುತ್ತಿರುವಾಗ ಒಂದನೇ ಕ್ಲಾಸಿನ ಕನ್ನಡ ಪುಸ್ತಕ ಸಿಕ್ತು. ಅದ್ರಲ್ಲಿ ಈ ಪದ್ಯ ನೋಡಿ ಸಿಕ್ಕಾಪಟ್ಟೆ ಖುಷಿ ಆಯ್ತು. ನೀವೂ ಓದಿದರೆ ಖುಷಿ ಪಡ್ತೀರಿ ಅಂತ ಇಲ್ಲಿ ಹಾಕಿದೆ. ನಿಮ್ಮ ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದರೆ ಅವರಿಗೆ ಇದನ್ನು ಹೇಳಿಕೊಡ್ತೀರ ಅಲ್ವಾ? ಇಂತಹ ಸುಂದರ ಪದ್ಯವನ್ನು ಕೊಟ್ಟ ಅಣ್ಣಾರಾಯ ಸಾಲಿಮನಿ ಅವರಿಗೆ ನನ್ನ ಧನ್ಯವಾದ ಅರ್ಪಿಸುತ್ತಿದ್ದೇನೆ.