Monday, March 14, 2011

ನನ್ನ ಕಂಪ್ಯೂಟರ್‍ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?

ಹಲೋ.. ಯಾರು ಪ್ರಸನ್ನನಾ?

ಹೌದು.

ನಾನು ಗೋಪಾಲರಾವ್ ಮಾತಾಡುದು..

ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ?

ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ.

ಯಾಕೆ? ಏನಾಗಿದೆ?

ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ?

ಸರಿ, ನಾಳೆ ಬಂದ್ರೆ ಆಗುತ್ತಾ?

ಆಯ್ತು ಪರ್ವಾಗಿಲ್ಲ, ನಿಂಗೆ ಟೈಮಾದಾಗ ಬಾ.

ಹಾಗಾದ್ರೆ ನಾಳೆ ಸಂಜೆ ಬರ್ತೀನಿ.

ಆಯ್ತು, ಹಂಗಾದ್ರೆ ಫೋನ್ ಇಡ್ತೀನಿ.

*******************
(ಗೋಪಾಲರಾಯರ ಮನೆಯಲ್ಲಿ)

ಪ್ರಸನ್ನ: ಗೋಪಾಲರಾಯರು ಮನೇಲಿದಾರಾ? ಕಂಪ್ಯೂಟರ್‍ ಹಾಳಾಗಿದೆ ಅಂತಿದ್ರು, ನೋಡೋಣಾಂತ ಬಂದೆ.

ಸುನಂದಮ್ಮ: ರೀ, ಪ್ರಸನ್ನ ಬಂದಿದಾನೆ. ಅದೆಂತದೋ ಕಂಪೀಟ್ರು ಹಾಳಾಗಿದೆ ಅಂತಿದ್ರಲ್ಲ, ನೋಡ್ತಾನಂತೆ.

ರಾಯರು: ನಾನೇ ಬರಕ್ಕೆ ಹೇಳಿದ್ದೆ. ಹೋಗಿ ಕಾಫಿ ಮಾಡ್ಕಂಡ್ ಬಾ.

ಪ್ರ: ಕಂಪ್ಯೂಟರ್‍ ಎಲ್ಲಿದೆ?

ರಾಯರು: ಒಳ್ಗಿದೆ, ಬಾ.

ಪ್ರ: ಏನು ತೊಂದ್ರೆ ಆಗ್ತಿದೆ?

ರಾ: ಪದೇ ಪದೇ ನಿಂತು ಹೋಗುತ್ತೆ. ಮೌಸು ಅಲ್ಲಾಡ್ಸಿದ್ರೂ ಆ ಬಾಣ ಅಲ್ಲಾಡಲ್ಲ. ಆಮೇಲೆ ಸ್ಟಾರ್ಟ್ ಬಟನ್‌ನಲ್ಲಿರೋ ಸುಮಾರು ಐಕಾನ್ಗಳು ಓಪನ್ನೇ ಆಗಲ್ಲ. ಇನ್ನೂ ಎಂತೆಂತದೋ ಆಗುತ್ತೆ. ಸುಮಾರು ಸಲ ಹಿಂಗೇ ಆಗಿತ್ತು. ಪ್ರತೀ ಸಲ ನಾಗೇಶ ಬಂದು ಸರಿ ಮಾಡಿ ನೂರುಪಾಯಿ ಇಸ್ಕಂಡು ಹೋಗ್ತಿದ್ದ. ಮತ್ತೆ ಇನ್ನೊಂದೆರ್ಡು ತಿಂಗ್ಳು ಆದ್ಮೇಲೆ ಇದೇ ರೀತಿ ಆಗ್ತಿತ್ತು. ಅವ್ನಿಗೆ ನೂರುಪಾಯಿ ಕೊಟ್ಟೂ ಕೊಟ್ಟೂ ಸಾಕಾಯ್ತು ಮಾರಾಯ. ಕೇಳಿದ್ರೆ ಕಂಪ್ಯೂಟ್ರು ಇಟ್ಕಂಡ್ಮೇಲೆ ಹಾಳು ಆಗ್ತನೇ ಇರ್ತದೆ, ಅದಕ್ಕೆಲ್ಲಾ ಏನೂ ಮಾಡಕ್ಕಾಗಲ್ಲ ಅಂತಾನೆ. ನೀನು ಬಿಟ್ಟಿಯಾಗಿ ರಿಪೇರಿ ಮಾಡಿಕೊಡ್ತಿ ಅಂತ ಶ್ರೀಧರ ಹೇಳ್ದ. ಅದ್ಕೇ ನಿಂಗೆ ಬರಕ್ಕೆ ಹೇಳ್ದೆ.

ಪ್ರಸನ್ನ: ಇದು, ವಿಂಡೋಸ್ ಹಾಳಾಗಿದೆ. ರಿಪೇರಿ ಮಾಡ್ಬೇಕು. ವಿಂಡೋಸ್ ಇನ್ಸ್ಟಾಲರ್‍ ಸಿಡಿ ಕೊಡಿ.

ರಾಯರು: ನನ್ಹತ್ರ ಅದೆಲ್ಲ ಎಂತ ಇಲ್ಲ ಮಾರಾಯ.

ಪ್ರ: ಹಾಗಾದ್ರೆ ನೀವು ದುಡ್ಡು ಕೊಟ್ಟು ವಿಂಡೋಸ್ ತಗೊಳ್ಲಿಲ್ವಾ?

ರಾ: ಇಲ್ಲ, ನಂಗೆ ಅದೆಲ್ಲಾ ಎಂತದೂ ಗೊತ್ತಿಲ್ಲ. ನಾಗೇಶನೇ ಕಂಪ್ಯೂಟ್ರು ತಂದಿಟ್ಟು ಅದನ್ನೆಲ್ಲಾ ಹಾಕಿಟ್ಟು ಹೋಗಿದ್ದ.

ಪ್ರಸನ್ನ: ನಾಗೇಶನ ಹತ್ರ ಇರೋದು ನಕಲಿ ವಿಂಡೋಸ್, ಅಂದ್ರೆ ಕದ್ದ ಮಾಲಿಗೆ ಸಮ. ಪೈರಸಿ ಮಾಡೋದು, ಹಾಗೂ ನಕಲಿ ವಿಂಡೋಸ್ ಬಳ್ಸೋದು ಅಪರಾಧ. ಈ ವಿಷ್ಯ ಅದನ್ನು ತಯಾರು ಮಾಡಿರೋ ಕಂಪ್ನಿಗೆ ಗೊತ್ತಾದ್ರೆ ಅವ್ನ ಜೊತೆ ನಿಮ್ಗೂ ಶಿಕ್ಷೆ ಆಗುತ್ತೆ. ಇದನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಿ. ಒಂದು ಏಳೆಂಟು ಸಾವ್ರ ರೂಪಾಯಿ ಖರ್ಚಾಗ್ಬೋದು. ಅಥ್ವಾ ನನ್ಹತ್ರ ಲಿನಕ್ಸ್ ಇದೆ. ಅದನ್ನು ಬೇಕಾದ್ರೆ ಇನ್ಸ್ಟಾಲ್ ಮಾಡಿ ಕೊಡ್ತೀನಿ. ಅದು ಫ್ರೀಯಾಗಿ ಸಿಗುತ್ತೆ.

ರಾಯರು: ಅಷ್ಟೆಲ್ಲಾ ಖರ್ಚಾಗುದಾದ್ರೆ ಸಧ್ಯಕ್ಕೆ ಬೇಡ ಮಾರಾಯ. ಇನ್ನೊಂದ್ಸಲ ನೋಡೋಣ. ಆ ಲೀನಕ್ಸೆಲ್ಲಾ ನಂಗೆ ಗೊತ್ತಾಗಲ್ಲ. ನಂಗೆ ಅದೇ ಸುಲಭ ಆಗ್ತಿತ್ತು.

ಪ್ರ: ಇಲ್ಲ ರಾಯರೇ, ಲಿನಕ್ಸ್ ಬಳ್ಸೋದು ಕಷ್ಟ ಏನಲ್ಲಾ. ಸ್ವಲ್ಪ ಅಭ್ಯಾಸ ಆದ್ರೆ ಆಮೇಲೆ ಉಪಯೋಗ್ಸದು ಸುಲಭ ಆಗುತ್ತೆ.

ರಾ: ಪರ್ವಾಗಿಲ್ಲ, ನಂಗೆ ಈಗೇನೂ ಕಂಪ್ಯೂಟ್ರು  ಬೇಕೇ ಬೇಕೂಂತ ಇಲ್ಲ. ಹಿಂಗೇ ಇರ್ಲಿ ಇನ್ಯಾವಾಗಾದ್ರೂ ಸರಿ ಮಾಡಿದ್ರಾಯ್ತು.

ಪ್ರಸನ್ನ: ಸರಿ ರಾಯರೇ, ನಾನಿನ್ನು ಬರ್ತೀನಿ. ಕತ್ಲಾದ್ರೆ ಸೈಕಲ್ ಹೊಡ್ಯೋದು ಕಷ್ಟ.

ರಾಯರು: ಆಯ್ತಪ್ಪ, ನಿಧಾನಕ್ಕೆ ಹೋಗು.

**********************
ಸುನಂದಮ್ಮ: ರೀ, ಕಂಪೀಟ್ರು ಸರಿಯಾಯ್ತಾ? ಅದೆಂತದೋ ಪೈರೀಸಿ, ಕದ್ದ ಮಾಲು ಅಂತೆಲ್ಲಾ ಹೇಳ್ತಿದ್ನಲ್ಲಾ, ಎಂತುದದು?

ರಾಯರು: ಅದೆಲ್ಲಾ ಎಂತೂ ಇಲ್ಲ ಕಣೆ, ಅವ್ನಿಗೆ ಕಂಪ್ಯೂಟ್ರು ಸರಿ ಮಾಡುದು ಹೆಂಗೇಂತ ಗೊತ್ತಾಗ್ಲಾಂತ ಕಾಣ್ತದೆ. ಅದ್ಕೇ ಎಂತೆಂತುದೋ ಹೇಳ್ಹೋದ. ಒಂದ್ನೂರುಪಾಯಿ ಹೋದ್ರೂ ಪರ್ವಾಗಿಲ್ಲ, ನಾಳೆ ನಾಗೇಶಂಗೇ ಬರಕ್ಕೆ ಹೇಳ್ತೀನಿ..

********************
:-)  :-)  :-)

-ಪ್ರಸನ್ನ.ಎಸ್.ಪಿ

14 Comments:

ಸತ್ಯ ಚರಣ ಎಸ್.ಎಂ.(Sathya Charana S.M.) said...

ಪ್ರಸನ್ನ..

ಸಕ್ಕತ್ತಾಗಿದೆ..!!
ಸರಿಯಾಗಿ ಹೇಳಿದಿರಿ..

ಜನಕ್ಕೆ ಹೊಸ ಪ್ರಯೋಗ.. ಅಂದ್ರೆ.. ಹಾಗೆ..
ಹಳೇ.. ತೊಂದರೆಯಲ್ಲೇ ಇರೋಣ.. ಆದರೆ,, ಹೊಸದಾದನ್ನು.. ಪ್ರಯತ್ನ ಮಾಡೋ.. ರಿಸ್ಕ್..ಬೇಡ ಅಂತಾರೆ..
ಆದರೆ.. ಅದರ ಜೊತೆ, ತಮಗೆ ಅರ್ಥ ಅಗದನ್ನ, ಅರ್ಥ ಮಾಡಿಕೊಳ್ಳೋ ಪ್ರಯತ್ನ ಮಾಡದೆ.. ಅದನ್ನ ಅರ್ಥ ಮಾಡಿಸುವವರನ್ನ ಅನರ್ಥರು ಅನ್ನುತ್ತಾರೆ..

ನಿಮ್ಮೊಲವಿನ,
ಸತ್ಯ.. :-)

Aravinda said...

ಸೂಪರ್ ಇದೆ ಕಣೋ ಪ್ರಸನ್ನ. :)

ಅಂದ ಹಾಗೆ, ನೀನು ಹೊರಟ ಮೇಲೆ ಮಾತಾಡಿದ್ದು ನಿಂಗೆ ಹೆಂಗೆ ಗೊತ್ತಾತು ಅಂತ.. :P

Ravishankar Haranath said...

ಒಳ್ಳೆ ವಿಚಾರವನ್ನು ಮುಂದಿಟ್ಟಿದ್ದೀರಿ. ಇದು ಇಂದಿನ ವಿಪರ್ಯಾಸವೂ ಹೌದು.

Harish said...

ನಿಜಕ್ಕೂ ಇದು ಇಂದಿನ ವಿಪರ್ಯಾಸವೇ ಸರಿ, ಬಹಳಶ್ಟು ಮಂದಿಗೆ ಪೈರೇಟೆಡ್ ಹಾಗು ಜೆನ್ಯೂನ್ ತಂತ್ರಾಂಶದ ಗೊಡವೆಯೇ ಇಲ್ಲಾ.

most of them are really o.k with a pirated install rather than shelling out some 3+ grands for a genuine OS.

one thing with linux adoption that is holding people is the transition or the rather steep learning curve: sad, but true even with ubuntu. Its still a very long way for a linux distro to gain acceptance with the majority of the home computer users! just like your Mr. Gopal Rao!

ಹಂಸಾನಂದಿ said...

ಚೆನ್ನಾಗಿದೆ :)

ಸುಬ್ರಮಣ್ಯ ಮಾಚಿಕೊಪ್ಪ said...

ತಮಾಷೆ ಲೇಖನ.

ಹರಿಹರಪುರ ಶ್ರೀಧರ್ said...

ತುಂಬಾ ಚೆನ್ನಾಗಿದೆ, ಪ್ರಸನ್ನ, ಸಕತ್ತಾಗಿ ಹೇಳಿದೀರಿ.

Anonymous said...

Sooooooooper ide ri. keep posting :)

Prasanna SP said...

ಸತ್ಯ ಚರಣ ಎಸ್.ಎಂ.(Sathya Charana S.M.): ನೀವೂ ಕಾಮೆಂಟಿನಲ್ಲಿ ಸರಿಯಾಗೇ ಹೇಳಿದ್ದೀರಿ. ನನ್ನ ಈ ಪೋಸ್ಟಿನ ಆಶಯ ನಿಮ್ಮ ಪ್ರತಿಕ್ರಿಯೆಯ ಮೂಲಕ ಬಂದಿದೆ! :)

ಧನ್ಯವಾದಗಳು..

Prasanna SP said...

@Aravinda: ಅಲ್ಲಿಂದ ಹೊರಟ ಮೇಲೆ ಮತ್ತೇನೋ ಕೇಳೋಕೆ ಅಂತ ವಾಪಾಸು ಹೋಗಿದ್ದೆ, ಆಗ ಕೇಳ್ತು! :)

Prasanna SP said...

Ravishankar Haranath: ಹೌದು, ಇದರ ಬಗ್ಗೆ ಎಲ್ಲರಲ್ಲೂ ಸರಿಯಾಗಿ ಜಾಗೃತಿ ಮೂಡಿಸಲೇಬೇಕು. ಪ್ರತಿಕ್ರಿಯೆಗಾಗಿ ಧನ್ಯವಾದಗಳು. :)

Prasanna SP said...

@Harish, ಪ್ರತಿಕ್ರಿಯೆಗಾಗಿ ಧನ್ಯವಾದಗಳು. :)

Prasanna SP said...

@ಹಂಸಾನಂದಿ, @ಸುಬ್ರಮಣ್ಯ ಮಾಚಿಕೊಪ್ಪ, @ಹರಿಹರಪುರ ಶ್ರೀಧರ್: ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು, :)

anirudha kulkarni said...

SUPER PRASANNA AVARE..

Post a Comment