Thursday, March 24, 2011

ಲಿನಕ್ಸಿನಲ್ಲಿ Force Quitನ ಉಪಯೋಗ

ಲಿನಕ್ಸಿನಲ್ಲಿ ಯಾವುದಾದರೂ ಅಪ್ಲಿಕೇಷನ್ ಹ್ಯಾಂಗ್ ಆಗಿದ್ದರೆ ಅಥವಾ ಆ ತಂತ್ರಾಂಶವನ್ನು ಮುಚ್ಚಲು ಆಗದಿರುವ ಸಂದರ್ಭದಲ್ಲಿ Force Quitನ್ನು ಬಳಸಬಹುದು. ಇದು respond ಮಾಡದಿರುವ ತಂತ್ರಾಂಶಗಳನ್ನು ಬಲವಂತವಾಗಿ ಮುಚ್ಚುತ್ತದೆ. Force Quitನ ಶಾರ್ಟ್ ಕಟ್‌ನ್ನು Panelನಲ್ಲಿ ಇಟ್ಟುಕೊಂಡಿರುವುದು ಒಳ್ಳೆಯದು. ಕೆಲವು ಸಂದರ್ಭದಲ್ಲಿ ಅದು ಉಪಯೋಗಕ್ಕೆ ಬರುತ್ತದೆ. ಅದಕ್ಕಾಗಿ ಮೊದಲು ಮೇಲಿನ Panel ಮೇಲೆ ರೈಟ್ ಕ್ಲಿಕ್ ಮಾಡಿ. [ನಾನು Application, System ಇತ್ಯಾದಿ ಇರುವ ಮೇಲಿನ Panelನ್ನೂ ಕೆಳಗೇ ಇಟ್ಟುಕೊಂಡಿದ್ದೇನೆ. ನಿಮಗೆ ಯಾವ Panelನಲ್ಲಿ Force Quitನ ಶಾರ್ಟ್ ಕಟ್ ಇದ್ದರೆ ಸುಲಭವೆನಿಸುತ್ತದೆಯೋ ಅದರ ಮೇಲೆ ರೈಟ್ ಕ್ಲಿಕ್ ಮಾಡಿ] ನಂತರ Add to Panel.. ಮೇಲೆ ಕ್ಲಿಕ್ ಮಾಡಿ.


 ಅಲ್ಲಿ ಸ್ವಲ್ಪ ಕೆಳಗೆ Force Quit ಇರುತ್ತದೆ, (ಸಿಗದಿದ್ದರೆ Find an item to add to the panel: ಎನ್ನುವಲ್ಲಿ Force Quit ಎಂದು ಟೈಪ್ ಮಾಡಿ, ಅದು ಹುಡುಕಿಕೊಡುತ್ತದೆ) ಅದರ ಮೇಲೆ ಕ್ಲಿಕ್ ಮಾಡಿ Add ಬಟನ್ ಒತ್ತಿ. ನಂತರ Close ಒತ್ತಿ.


 ಈಗ Panelನಲ್ಲಿ Force Quitನ ಶಾರ್ಟ್ ಕಟ್ ಬಂದಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

 ನಂತರ Click on a windows to force the application to quit. To cancel press <ESC> ಎಂದು ತೋರಿಸುತ್ತದೆ ಮತ್ತು ಕರ್ಸರ್‍ ಪ್ಲಸ್ ಚಿಹ್ನೆಗೆ ಬದಲಾಗುತ್ತದೆ. ಆಗ ನೀವು ಮುಚ್ಚಲು ಬಯಸುವ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ. (ಅಥವಾ Force Quit ಉಪಯೋಗಿಸುವುದು ಬೇಡ ಅನ್ನಿಸಿದಲ್ಲಿ ಎಸ್ಕೇಪ್ ಬಟನ್ ಒತ್ತಿ.)


 ಕೊನೆಯ ಬಾರಿ ದೃಢಪಡಿಸಲು ನಿಮ್ಮ ಅನುಮತಿ ಕೇಳುತ್ತದೆ. ಆಗ Force Quit ಬಟನ್ ಒತ್ತಿ. ಅಲ್ಲಿಗೆ ತೊಂದರೆ ಕೊಡುತ್ತಿರುವ ಅಪ್ಲಿಕೇಶನ್ ಕ್ಲೋಸ್ ಆಗುತ್ತೆ. ಆದರೆ ನೆನಪಿಡಿ, Force Quit ಉಪಯೋಗಿಸಿದರೆ, ಆ ಅಪ್ಲಿಕೇಶನ್‌ನಲ್ಲಿ ನೀವು ಸೇವ್ ಮಾಡಿರದ ಅಷ್ಟೂ ಕಂಟೆಂಟ್‌ನ್ನು ಕಳೆದುಕೊಳ್ಳುತ್ತೀರಿ.



ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Monday, March 14, 2011

ನನ್ನ ಕಂಪ್ಯೂಟರ್‍ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?

ಹಲೋ.. ಯಾರು ಪ್ರಸನ್ನನಾ?

ಹೌದು.

ನಾನು ಗೋಪಾಲರಾವ್ ಮಾತಾಡುದು..

ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ?

ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ.

ಯಾಕೆ? ಏನಾಗಿದೆ?

ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ?

ಸರಿ, ನಾಳೆ ಬಂದ್ರೆ ಆಗುತ್ತಾ?

ಆಯ್ತು ಪರ್ವಾಗಿಲ್ಲ, ನಿಂಗೆ ಟೈಮಾದಾಗ ಬಾ.

ಹಾಗಾದ್ರೆ ನಾಳೆ ಸಂಜೆ ಬರ್ತೀನಿ.

ಆಯ್ತು, ಹಂಗಾದ್ರೆ ಫೋನ್ ಇಡ್ತೀನಿ.

*******************
(ಗೋಪಾಲರಾಯರ ಮನೆಯಲ್ಲಿ)

ಪ್ರಸನ್ನ: ಗೋಪಾಲರಾಯರು ಮನೇಲಿದಾರಾ? ಕಂಪ್ಯೂಟರ್‍ ಹಾಳಾಗಿದೆ ಅಂತಿದ್ರು, ನೋಡೋಣಾಂತ ಬಂದೆ.

ಸುನಂದಮ್ಮ: ರೀ, ಪ್ರಸನ್ನ ಬಂದಿದಾನೆ. ಅದೆಂತದೋ ಕಂಪೀಟ್ರು ಹಾಳಾಗಿದೆ ಅಂತಿದ್ರಲ್ಲ, ನೋಡ್ತಾನಂತೆ.

ರಾಯರು: ನಾನೇ ಬರಕ್ಕೆ ಹೇಳಿದ್ದೆ. ಹೋಗಿ ಕಾಫಿ ಮಾಡ್ಕಂಡ್ ಬಾ.

ಪ್ರ: ಕಂಪ್ಯೂಟರ್‍ ಎಲ್ಲಿದೆ?

ರಾಯರು: ಒಳ್ಗಿದೆ, ಬಾ.

ಪ್ರ: ಏನು ತೊಂದ್ರೆ ಆಗ್ತಿದೆ?

ರಾ: ಪದೇ ಪದೇ ನಿಂತು ಹೋಗುತ್ತೆ. ಮೌಸು ಅಲ್ಲಾಡ್ಸಿದ್ರೂ ಆ ಬಾಣ ಅಲ್ಲಾಡಲ್ಲ. ಆಮೇಲೆ ಸ್ಟಾರ್ಟ್ ಬಟನ್‌ನಲ್ಲಿರೋ ಸುಮಾರು ಐಕಾನ್ಗಳು ಓಪನ್ನೇ ಆಗಲ್ಲ. ಇನ್ನೂ ಎಂತೆಂತದೋ ಆಗುತ್ತೆ. ಸುಮಾರು ಸಲ ಹಿಂಗೇ ಆಗಿತ್ತು. ಪ್ರತೀ ಸಲ ನಾಗೇಶ ಬಂದು ಸರಿ ಮಾಡಿ ನೂರುಪಾಯಿ ಇಸ್ಕಂಡು ಹೋಗ್ತಿದ್ದ. ಮತ್ತೆ ಇನ್ನೊಂದೆರ್ಡು ತಿಂಗ್ಳು ಆದ್ಮೇಲೆ ಇದೇ ರೀತಿ ಆಗ್ತಿತ್ತು. ಅವ್ನಿಗೆ ನೂರುಪಾಯಿ ಕೊಟ್ಟೂ ಕೊಟ್ಟೂ ಸಾಕಾಯ್ತು ಮಾರಾಯ. ಕೇಳಿದ್ರೆ ಕಂಪ್ಯೂಟ್ರು ಇಟ್ಕಂಡ್ಮೇಲೆ ಹಾಳು ಆಗ್ತನೇ ಇರ್ತದೆ, ಅದಕ್ಕೆಲ್ಲಾ ಏನೂ ಮಾಡಕ್ಕಾಗಲ್ಲ ಅಂತಾನೆ. ನೀನು ಬಿಟ್ಟಿಯಾಗಿ ರಿಪೇರಿ ಮಾಡಿಕೊಡ್ತಿ ಅಂತ ಶ್ರೀಧರ ಹೇಳ್ದ. ಅದ್ಕೇ ನಿಂಗೆ ಬರಕ್ಕೆ ಹೇಳ್ದೆ.

ಪ್ರಸನ್ನ: ಇದು, ವಿಂಡೋಸ್ ಹಾಳಾಗಿದೆ. ರಿಪೇರಿ ಮಾಡ್ಬೇಕು. ವಿಂಡೋಸ್ ಇನ್ಸ್ಟಾಲರ್‍ ಸಿಡಿ ಕೊಡಿ.

ರಾಯರು: ನನ್ಹತ್ರ ಅದೆಲ್ಲ ಎಂತ ಇಲ್ಲ ಮಾರಾಯ.

ಪ್ರ: ಹಾಗಾದ್ರೆ ನೀವು ದುಡ್ಡು ಕೊಟ್ಟು ವಿಂಡೋಸ್ ತಗೊಳ್ಲಿಲ್ವಾ?

ರಾ: ಇಲ್ಲ, ನಂಗೆ ಅದೆಲ್ಲಾ ಎಂತದೂ ಗೊತ್ತಿಲ್ಲ. ನಾಗೇಶನೇ ಕಂಪ್ಯೂಟ್ರು ತಂದಿಟ್ಟು ಅದನ್ನೆಲ್ಲಾ ಹಾಕಿಟ್ಟು ಹೋಗಿದ್ದ.

ಪ್ರಸನ್ನ: ನಾಗೇಶನ ಹತ್ರ ಇರೋದು ನಕಲಿ ವಿಂಡೋಸ್, ಅಂದ್ರೆ ಕದ್ದ ಮಾಲಿಗೆ ಸಮ. ಪೈರಸಿ ಮಾಡೋದು, ಹಾಗೂ ನಕಲಿ ವಿಂಡೋಸ್ ಬಳ್ಸೋದು ಅಪರಾಧ. ಈ ವಿಷ್ಯ ಅದನ್ನು ತಯಾರು ಮಾಡಿರೋ ಕಂಪ್ನಿಗೆ ಗೊತ್ತಾದ್ರೆ ಅವ್ನ ಜೊತೆ ನಿಮ್ಗೂ ಶಿಕ್ಷೆ ಆಗುತ್ತೆ. ಇದನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಿ. ಒಂದು ಏಳೆಂಟು ಸಾವ್ರ ರೂಪಾಯಿ ಖರ್ಚಾಗ್ಬೋದು. ಅಥ್ವಾ ನನ್ಹತ್ರ ಲಿನಕ್ಸ್ ಇದೆ. ಅದನ್ನು ಬೇಕಾದ್ರೆ ಇನ್ಸ್ಟಾಲ್ ಮಾಡಿ ಕೊಡ್ತೀನಿ. ಅದು ಫ್ರೀಯಾಗಿ ಸಿಗುತ್ತೆ.

ರಾಯರು: ಅಷ್ಟೆಲ್ಲಾ ಖರ್ಚಾಗುದಾದ್ರೆ ಸಧ್ಯಕ್ಕೆ ಬೇಡ ಮಾರಾಯ. ಇನ್ನೊಂದ್ಸಲ ನೋಡೋಣ. ಆ ಲೀನಕ್ಸೆಲ್ಲಾ ನಂಗೆ ಗೊತ್ತಾಗಲ್ಲ. ನಂಗೆ ಅದೇ ಸುಲಭ ಆಗ್ತಿತ್ತು.

ಪ್ರ: ಇಲ್ಲ ರಾಯರೇ, ಲಿನಕ್ಸ್ ಬಳ್ಸೋದು ಕಷ್ಟ ಏನಲ್ಲಾ. ಸ್ವಲ್ಪ ಅಭ್ಯಾಸ ಆದ್ರೆ ಆಮೇಲೆ ಉಪಯೋಗ್ಸದು ಸುಲಭ ಆಗುತ್ತೆ.

ರಾ: ಪರ್ವಾಗಿಲ್ಲ, ನಂಗೆ ಈಗೇನೂ ಕಂಪ್ಯೂಟ್ರು  ಬೇಕೇ ಬೇಕೂಂತ ಇಲ್ಲ. ಹಿಂಗೇ ಇರ್ಲಿ ಇನ್ಯಾವಾಗಾದ್ರೂ ಸರಿ ಮಾಡಿದ್ರಾಯ್ತು.

ಪ್ರಸನ್ನ: ಸರಿ ರಾಯರೇ, ನಾನಿನ್ನು ಬರ್ತೀನಿ. ಕತ್ಲಾದ್ರೆ ಸೈಕಲ್ ಹೊಡ್ಯೋದು ಕಷ್ಟ.

ರಾಯರು: ಆಯ್ತಪ್ಪ, ನಿಧಾನಕ್ಕೆ ಹೋಗು.

**********************
ಸುನಂದಮ್ಮ: ರೀ, ಕಂಪೀಟ್ರು ಸರಿಯಾಯ್ತಾ? ಅದೆಂತದೋ ಪೈರೀಸಿ, ಕದ್ದ ಮಾಲು ಅಂತೆಲ್ಲಾ ಹೇಳ್ತಿದ್ನಲ್ಲಾ, ಎಂತುದದು?

ರಾಯರು: ಅದೆಲ್ಲಾ ಎಂತೂ ಇಲ್ಲ ಕಣೆ, ಅವ್ನಿಗೆ ಕಂಪ್ಯೂಟ್ರು ಸರಿ ಮಾಡುದು ಹೆಂಗೇಂತ ಗೊತ್ತಾಗ್ಲಾಂತ ಕಾಣ್ತದೆ. ಅದ್ಕೇ ಎಂತೆಂತುದೋ ಹೇಳ್ಹೋದ. ಒಂದ್ನೂರುಪಾಯಿ ಹೋದ್ರೂ ಪರ್ವಾಗಿಲ್ಲ, ನಾಳೆ ನಾಗೇಶಂಗೇ ಬರಕ್ಕೆ ಹೇಳ್ತೀನಿ..

********************
:-)  :-)  :-)

-ಪ್ರಸನ್ನ.ಎಸ್.ಪಿ

Saturday, March 12, 2011

ಡಿಸ್ಕ್ ನ್ನು defragment ಮಾಡುವುದರ ಮೂಲಕ ಕಂಪ್ಯೂಟರ್‍ ಚುರುಕುಗೊಳಿಸಿ!

ನಿಮ್ಮ ಕಂಪ್ಯೂಟರ್‍ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದೆಯೇ ಹಾಗಾದರೆ ಕೆಲವು ಮುಖ್ಯವಾದ ಡ್ರೈವ್‌ಗಳನ್ನು defragment ಮಾಡುವುದರ ಮೂಲಕ ಕಂಪ್ಯೂಟರ್‌ನ್ನು ಸ್ವಲ್ಪ ಮಟ್ಟಿಗೆ ಚುರುಕುಗೊಳಿಸಬಹುದು. ಅದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳುವ ಮೊದಲು ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಟೇಬಲ್ ಮೇಲೆ ಕಡತಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲೆಲ್ಲೋ ಬಿದ್ದಿದೆ. ಆಗ ನಿಮಗೆ ಬೇಕಾದ ಕಡತವನ್ನು ಹುಡುಕಿಕೊಂಡು ತೆಗೆಯಬೇಕಾದರೆ ಹೆಚ್ಚು ಸಮಯ ಬೇಕಾಗುತ್ತದಲ್ಲವೇ? ಅದೇ ಕಡತಗಳು ಒಪ್ಪವಾಗಿ ಜೋಡಿಸಿಟ್ಟಿದ್ದರೆ ನಮಗೆ ಬೇಕಾದ ಕಡತಗಳನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಹುಡುಕಬಹುದು ಮತ್ತು ನೀಟಾಗಿ ಇಟ್ಟಿರುವುದರಿಂದ ಹೆಚ್ಚು ಜಾಗವೂ ಸಿಗುತ್ತದೆ ಅಲ್ಲವೇ? ನಾವು defragment ಮಾಡಿದಾಗಲೂ ಡಿಸ್ಕ್‌ನಲ್ಲಿ ಇದೇ ರೀತಿ ಆಗುತ್ತದೆ. ಅಂದರೆ ಎಲ್ಲೆಲ್ಲೋ ಹಂಚಿ ಹೋಗಿರುವ ಕಡತಗಳೆಲ್ಲಾ ನೀಟಾಗಿ ಜೋಡಿಸಲ್ಪಡುತ್ತದೆ. ಇದರಿಂದ ಬೇಕಾದ ಕಡತಗಳನ್ನು ಹೆಕ್ಕಿ ತೆಗೆಯಲೂ ಕಂಪ್ಯೂಟರಿಗೆ ಸುಲಭವಾಗುತ್ತದೆ ಮತ್ತು ಸಮಯವೂ ಉಳಿಯುವುದರಿಂದ ಕೆಲಸ ಬೇಗನೇ ಆಗುತ್ತದೆ. ಅದೂ ಅಲ್ಲದೇ ಒಮ್ಮೆಲೇ ಹೆಚ್ಚು ಖಾಲಿ ಜಾಗ (free space) ದೊರೆಯುತ್ತದೆ. ಹಾಗಾದರೆ defragment ಮಾಡುವುದು ಹೇಗೆಂದು ನೋಡೋಣವೇ?

(ವಿಂಡೋಸ್ ಬಳಕೆದಾರರಿಗೆ)

ಮೊದಲು Disk Defragmenter ಓಪನ್ ಮಾಡಿ (Start-->Programs-->Accessories-->System Tools-->Disk Defragmenter, ಅಥವಾ Start-->Run ಮೇಲೆ ಕ್ಲಿಕ್ ಮಾಡಿ ಮತ್ತು dfrg.msc ಎಂದು ಟೈಪ್ ಮಾಡಿ OK ಒತ್ತಿ).


ನಂತರ ಮೊದಲನೇ ಡ್ರೈವ್ (ಪಾರ್ಟಿಶನ್) ಆರಿಸಿಕೊಂಡು, ಕೆಳಗಿರುವ Analyze ಬಟನ್ ಒತ್ತಿ.

(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಒಂದೆರಡು ಸೆಕೆಂಡ್ ನಂತರ Analyze ಮುಗಿದಿದೆ ಎಂದು ಸಂದೇಶ ಬರುತ್ತದೆ. ಅಲ್ಲಿ You need to defragment this volume ಎಂದು ಬಂದರೆ ಅಲ್ಲೇ ಕೆಳಗಿರುವ Defragment ಬಟನ್ ಒತ್ತಿ. ಇಲ್ಲದಿದ್ದರೆ ಬೇಡ.


ನಂತರದಲ್ಲಿ Defragment ಆಗುತ್ತಿರುವುದನ್ನು ನೋಡಬಹುದು. ಅಲ್ಲದೇ ಎಷ್ಟು ಪ್ರತಿಶತ Defragment ಆಗಿದೆ ಎಂದೂ ತೋರಿಸುತ್ತದೆ.


Defragment ಪೂರ್ಣವಾದ ಸಂದೇಶ ಬಂದ ನಂತರ Close ಒತ್ತಿ.


Estimated disk usage before defragmentation: ಹಾಗೂ Estimated disk usage after defragmentation:ನಲ್ಲಿರುವ ಮಾಹಿತಿಯನ್ನು ಗಮನಿಸಿದರೆ ಏನೇನು ಕೆಲಸ ಆಗಿದೆ ಎಂದು ತಿಳಿಯುತ್ತದೆ.


ಇದೇ ರೀತಿ ಉಳಿದ ಪಾರ್ಟಿಶನ್‌ಗಳನ್ನೂ defragment ಮಾಡಬಹುದು.


ನೀವು ಪ್ರತಿದಿನ ಕಂಪ್ಯೂಟರ್‌ನ್ನು ಉಪಯೋಗಿಸುತ್ತಿದ್ದರೆ ಎರಡು ಮೂರು ವಾರಗಳಿಗೊಮ್ಮೆ defragment ಮಾಡುವುದು ಒಳ್ಳೆಯದು. ಇದೂ ಅಲ್ಲದೇ ಇನ್ನೂ ಅನೇಕ ಮಾರ್ಗಗಳನ್ನು ಅನುಸರಿಸುವುದರಿಂದ ನಿಮ್ಮ ಕಂಪ್ಯೂಟರ್‌ ವೇಗವಾಗಿ ಕೆಲಸ ಮಾಡುವಂತೆ ಮಾಡಬಹುದು.

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Saturday, February 5, 2011

ಕಲರ್‌ಫುಲ್ ಗ್ರಬ್ ಲೋಡರ್‍ ಬೇಕೆ?

ಲೈಫ್‌ನಲ್ಲಿ ಎಲ್ಲವೂ ಕಲರ್‌ಫುಲ್ ಆಗಿದ್ರೇನೆ ಚೆಂದ ಅಲ್ಲವೇ? ನಾವು ಈ ಕಲರ್‌ಫುಲ್ ಯುಗದಲ್ಲಿ black and white ಟಿವಿ ನೋಡಲು ಇಷ್ಟಪಡುವುದಿಲ್ಲ ಅಲ್ವಾ? ಇದೇ ರೀತಿ ಗ್ರಬ್ ಲೋಡರ್‌ನಲ್ಲಿ ಅದೇ ಕಪ್ಪು background ಮತ್ತು ಬಿಳಿ ಅಕ್ಷರಗಳನ್ನು ನೋಡಿ, ನೋಡಿ ಬೇಜಾರಾಗಿದೆಯೇ? ಹಾಗಾದರೆ ಗ್ರಬ್ ಕಾನ್ಫಿಗರೇಷನ್ ಫೈಲ್‌ನಲ್ಲಿ ಸ್ವಲ್ಪ ಆಟವಾಡಿ ನೋಡಿ, ಆಮೇಲೆ ಗ್ರಬ್ ಲೋಡರ್‌ನಲ್ಲಿ ಬಣ್ಣ ಬಣ್ಣದ ಅಕ್ಷರಗಳನ್ನು ಕಂಡು ಆನಂದಿಸಿ.

ಮೊದಲಿಗೆ Terminalನಲ್ಲಿ ಕೆಳಗಿನ ಕಮ್ಯಾಂಡ್ ಓಡಿಸಿ,
sudo gedit /boot/grub/grub.cfg

(ಹಳೆಯ ಉಬುಂಟು ಆವೃತ್ತಿ ಇಟ್ಟುಕೊಂಡಿರುವವರು ಇದನ್ನು ರನ್ ಮಾಡಿ,
sudo gedit /boot/grub/menu.lst)

ನಂತರ ಬರುವ ಗ್ರಬ್ ಕಾನ್ಫಿಗರೇಷನ್ ಫೈಲ್‌ನ ಸುಮಾರು 64 ಮತ್ತು 65ನೇ ಸಾಲಿನಲ್ಲಿ
set menu_color_normal=white/black
(ಹಾಗೂ ನಂತರದ ಸಾಲಿನಲ್ಲಿ)
set menu_color_highlighted=black/light-gray ಅಂತ ಇದೆಯೇ ಎಂದು ನೋಡಿ. ಅಲ್ಲಿ ಇಲ್ಲದಿದ್ದರೆ ಸ್ವಲ್ಪ ಮೇಲೆ ಕೆಳಗೆ ಹುಡುಕಿ, ಸಿಗುತ್ತದೆ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಇಲ್ಲಿ ಮೊದಲನೆಯ ಸಾಲಿನಲ್ಲಿ (set menu_color_normal=), ಎರಡು ಬಣ್ಣಗಳ ಹೆಸರು ಇದೆಯಲ್ಲ (white/black), ಅದು ಗ್ರಬ್‌ನಲ್ಲಿ ಫಾಂಟ್ ಬಣ್ಣ ಮತ್ತು ಗ್ರಬ್‌ನ ಹಿಂಬದಿ ಬಣ್ಣವನ್ನು ಸೂಚಿಸುತ್ತದೆ. ಅಂದರೆ ಕಪ್ಪು ಹಿನ್ನಲೆಯಲ್ಲಿ ಬಿಳಿ ಅಕ್ಷರಗಳು. ಈಗ ಅದನ್ನು ನಿಮಗೆ ಬೇಕಾದ ಬಣ್ಣಗಳಿಗೆ ಬದಲಾಯಿಸಿ. ಉದಾಹರಣೆಗೆ: light-blue/black. ಇದು ಕಪ್ಪು ಹಿನ್ನಲೆಯಲ್ಲಿ, ತಿಳಿ ನೀಲಿ ಅಕ್ಷರಗಳನ್ನು ನೂಚಿಸುತ್ತದೆ. ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಿ. ಬಣ್ಣಗಳನ್ನು ಸೂಚಿಸುವಾಗ ಸಾಮಾನ್ಯ ಬಳಕೆಯಲ್ಲಿರುವ, ಅಂದರೆ ಕಂಪ್ಯೂಟರ್‌ಗೆ ಸುಲಭವಾಗಿ ಗೊತ್ತಾಗುವ ಬಣ್ಣಗಳನ್ನೇ ಕೊಡಿ. ಅಂದರೆ black, white, red, blue, gray, light-blue, green, yellow ಇತ್ಯಾದಿ. ನೀವು violet, purple, brick-red ಅಂತೆಲ್ಲಾ ಕೊಟ್ಟರೆ ಅದಕ್ಕೆ ಗೊತ್ತಾಗಲ್ಲ! ;-)



ಅದರ ನಂತರದ ಸಾಲು ಇದೆಯಲ್ಲ(set menu_color_highlighted=), ಅದು ಹೈಲೈಟ್ ಆದ entryಯ ಬಣ್ಣವನ್ನು(black/light-gray) ಸೂಚಿಸುತ್ತದೆ. ಅಂದರೆ ಹೈಲೈಟ್ ಆದ ಎಂಟ್ರಿಯ ಹಿನ್ನೆಲೆ ಬಣ್ಣ light-gray ಮತ್ತು ಅಕ್ಷರದ ಬಣ್ಣ ಕಪ್ಪನ್ನು ಸೂಚಿಸುತ್ತದೆ. ಇಲ್ಲಿಯೂ ನಿಮಗೆ ಇಷ್ಟವಾಗುವ ಬಣ್ಣಗಳಿಗೆ ಬದಲಾಯಿಸಿ. ಉದಾಹರಣೆಗೆ: red/yellow ಅಂದರೆ ಹೈಲೈಟ್ ಆದ ಎಂಟ್ರಿಯ ಫಾಂಟ್ ಕಲರ್‍ ಕೆಂಪು, ಮತ್ತು ಹಿನ್ನೆಲೆ ಬಣ್ಣ ಹಳದಿ. ಇಲ್ಲಿಯೂ ಕೂಡ ಬಣ್ಣಗಳನ್ನು ಸೂಚಿಸುವಾಗ ಸ್ವಲ್ಪ ಎಚ್ಚರ ವಹಿಸಿ. ನಂತರ ಫೈಲ್‌ನ್ನು ಸೇವ್ ಮಾಡಿ, ಕಂಪ್ಯೂಟರ್‍ ರೀಸ್ಟಾರ್ಟ್ ಮಾಡಿ. ಈಗ ನೋಡಿದರೆ ಗ್ರಬ್ ಲೋಡರ್‍ ಬಣ್ಣ ಬಣ್ಣದಿಂದ ಕಂಗೊಳಿಸುತ್ತಿರಬೇಕಲ್ಲವೇ? ಮೇಲೆ ಹೈಲೈಟ್ ಆದ ಎಂಟ್ರಿಯ ಬಣ್ಣ ಹಳದಿ ಕೊಟ್ಟಿರುವುದರಿಂದ ಅದು ಮಿನುಗುತ್ತದೆ ಕೂಡಾ.

ಸೂಚನೆ: ಗ್ರಬ್ ಕಾನ್ಫಿಗರೇಷನ್ ಫೈಲ್‌ನಲ್ಲಿ ಏನೇ ಬದಲಾವಣೆ ಮಾಡುವ ಮೊದಲೂ ಸೂಕ್ತ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಯಡವಟ್ಟಾದರೂ ಆಮೇಲೆ ಲಿನಕ್ಸ್, ವಿಂಡೋಸ್ ಯಾವ್ದೂ ಬೂಟಾಗಲ್ಲ. ಆದ್ರಿಂದ ಮೇಲಿನ ಬದಲಾವಣೆ ಮಾಡುವಾಗ ಸಾಕಷ್ಟು ಎಚ್ಚರಿಕೆ ಅಗತ್ಯ.

Thursday, January 20, 2011

ತರ್ಲೆ ಸಂಚಿಕೆ.. ಪ್ರಶ್ನೆ-1

ನಿಮಗೆಲ್ಲಾ ತರ್ಲೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯೋಣ ಅಂತ ಅನಿಸಿತು. ಅದಕ್ಕೇ ಈ ಹೊಸ ಅಂಕಣ ಪ್ರಾರಂಭ ಮಾಡಿದ್ದೇನೆ. ನೀವು ಉತ್ರ ಹೇಳ್ತೀರ ಅಲ್ವಾ? ;-)

ತರ್ಲೆ ಪ್ರಶ್ನೆ 1: ಒಂದೂರಲ್ಲಿ ಒಬ್ಬ ಕಳ್ಳ ಇರ್ತಾನೆ. ಅವನು ಮಹಾನ್ ಚಾಣಾಕ್ಷ ಚೋರ. ಯಾವುದೇ ಸಣ್ಣ ಸುಳುಹನ್ನೂ ಬಿಡದಂತೆ ಕಳ್ಳತನ ಮಾಡ್ತಾ ಇರ್ತಾನೆ. ಹಾಗೆಯೇ ಕದ್ದ ವಸ್ತುಗಳನ್ನು ಯಾರಿಗೂ ಗೊತ್ತಾಗದ ಹಾಗೆ ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಕತ್ತಲೆ ಕೋಣೆಯಲ್ಲಿ ಬಚ್ಚಿಡುತ್ತಿರುತ್ತಾನೆ. ಒಂದು ರಾತ್ರಿ ಕಾವಲುಗಾರರು ನಿದ್ದೆ ಮಾಡುತ್ತಿರುವ ಸಮಯ ನೋಡಿ ಅರಮನೆಯ ತಿಜೋರಿಗೆ ಈತ ಕನ್ನ ಹಾಕ್ತಾನೆ. ಅಲ್ಲಿ ಅವನಿಗೆ ಅತ್ಯಂತ ಬೆಲೆಬಾಳುವ ಮೂರು ವಜ್ರ ಕಾಣುತ್ತದೆ. ಅದರಲ್ಲಿ ಒಂದು ಸಾಮಾನ್ಯ ವಜ್ರ, ಇನ್ನೊಂದು ಸ್ವಲ್ಪ ಕೆಂಪು ಬಣ್ಣದ ವಜ್ರ ಹಾಗೂ ಕೊನೆಯದು ನೀಲಿ ಬಣ್ಣದ ವಜ್ರ. ಸರಿ ಅಂತ ಆ ಮೂರೂ ವಜ್ರಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡ್ತಾನೆ. ಅರಮನೆಯಿಂದ ಕೊರಟವನೇ, ಸೀದಾ ಬಂದು ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಕತ್ತಲಕೋಣೆಯಲ್ಲಿ ಆ ವಜ್ರದ ಗಂಟನ್ನು ಇಟ್ಟು, ನಿದ್ದೆ ಮಾಡಲು ಹೋಗುತ್ತಾನೆ. ಆದರೆ ಆ ವಜ್ರಗಳು ಎಷ್ಟು ಬೆಲೆಬಾಳಬಹುದು, ಯಾವುದು ಹೆಚ್ಚು ಹೊಳೆಯಬಹುದು ಎಂದು ಯೋಚಿಸಲು ಶುರು ಮಾಡಿದ ಆತನಿಗೆ ಏನು ಮಾಡಿದರೂ ನಿದ್ದೆ ಬರೋಲ್ಲ. ಹಾಗಾಗಿ ಆತ ಎದ್ದು ಮತ್ತೆ ಆ ನೆಲಮಾಳಿಗೆಯ ಕೋಣೆಗೆ ಹೋಗುತ್ತಾನೆ. ಅಲ್ಲಿ ವಜ್ರಗಳಿರುವ ಬಟ್ಟೆಯ ಗಂಟನ್ನು ಬಿಚ್ಚಿ ನೋಡುತ್ತಾನೆ.

ಈಗ ಪ್ರಶ್ನೆ ಇರುವುದು ನಿಮಗೆ. "ಆ ಕಳ್ಳ ಬಟ್ಟೆಯ ಗಂಟನ್ನು ತೆಗೆದು ನೋಡಿದಾಗ ಯಾವ ಬಣ್ಣದ ವಜ್ರ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ? ಮತ್ತು ಅದಕ್ಕೆ ಕಾರಣವೇನು? ಉತ್ತರ ಹೇಳ್ತೀರ ಅಲ್ವಾ?

ಸರಿಯಾದ ಉತ್ತರ ಮುಂದಿನ ಸಂಚಿಕೆಯಲ್ಲಿ...

[ಈ ಕಥೆ ಸಂಪೂರ್ಣವಾಗಿ ನಾನು ಬರೆದದ್ದು, ಎಲ್ಲಿಂದಲೂ ಕದ್ದಿಲ್ಲ.. :-)  ]