Thursday, August 5, 2010

ವಿಂಡೋಸ್ ಬೂಟ್‌‌ನಲ್ಲಿ ತೊಂದರೆ


ನಿನ್ನೆ ನನ್ನ ಕಂಪ್ಯೂಟರ್‍ ಚಾಲನೆ ಮಾಡಿದರೆ ವಿಂಡೋಸ್(ಎಕ್ಸ್‌‌ಪಿ) ಬೂಟ್ ಆಗುತ್ತಿರಲಿಲ್ಲ, ಬದಲಿಗೆ

"Windows could not start because of an error in the software.

Please report this problem as,
load needed DLLs for kernel.

Please contact your support person to report this problem"

ಎಂಬ ಸಂದೇಶ ಬರುತ್ತಿತ್ತು. fixmbr, fixboot, ಮುಂತಾದ ಕಮ್ಯಾಂಡ್‌‌ಗಳನ್ನು ಉಪಯೋಗಿಸಿ ವಿಂಡೋಸ್ ಸರಿಮಾಡಲು ಹೋದರೆ ಏನು ಪ್ರಯೋಜನವಾಗಲಿಲ್ಲ. ವಿಂಡೋಸ್ repair ಕೂಡ ಆಗುತ್ತಿರಲಿಲ್ಲ. ಅದನ್ನು ಸರಿಪಡಿಸುವಷ್ಟು ತಾಳ್ಮೆಯೂ ಇರಲಿಲ್ಲ. ಕೊನೆಗೆ ಲಿನಕ್ಸ್ ಬಳಸಿ C ಡ್ರೈವ್‌‌ನ ಬ್ಯಾಕಪ್ ತೆಗೆದುಕೊಂಡು, ವಿಂಡೋಸ್‌ನ್ನು ಮರುಸ್ಥಾಪಿಸಿದೆ.

ಈ ರೀತಿ ಏಕಾಗಿರಬಹುದು ಎಂದು ನಿಮಗೇನಾದರೂ ಗೊತ್ತಾದರೆ ತಿಳಿಸಿ. ಹಾಗೆಯೇ ಮುಂದೆ ಈ ರೀತಿ ಅದರೆ ಹೇಗೆ ಸರಿಪಡಿಸಬಹುದು ಎಂದೂ ತಿಳಿಸಿ.

-ಪ್ರಸನ್ನ.ಎಸ್.ಪಿ

Wednesday, August 4, 2010

ಭಾರತೀಯರಿಗಾಗಿ ಭಾರತೀಯ ಬ್ರೌಸರ್


"ಭಾರತೀಯರಿಗಾಗಿ ಭಾರತೀಯ ಬ್ರೌಸರ್‍" ಎಂಬ ಸ್ಲೋಗನ್‌‌ನೊಂದಿಗೆ ಬಂದಿದೆ ಎಪಿಕ್ ಬ್ರೌಸರ್‍. ಮೊಝಿಲ್ಲ ಫೈರ್‌‌ಫಾಕ್ಸ್‌‌ನ ಪ್ಲಾಟ್‌‌ಫಾರ್ಮ್‌‌ನಲ್ಲಿಯೇ ನಿರ್ಮಿತವಾಗಿದ್ದರೂ ಫೈರ್‌‌‌ಫಾಕ್ಸ್‌ಗಿಂತ ಸಾಕಷ್ಟು ಭಿನ್ನವಾಗಿದೆ. Anti-virus ಹೊಂದಿರುವುದು ಇದರ ವಿಶೇಷ. 1500ಕ್ಕೂ ಹೆಚ್ಚು ಥೀಮ್ ಹಾಗೂ ವಾಲ್‌ಪೇಪರ್‌‌ಗಳನ್ನು ಆರಿಸಿಕೊಳ್ಳುವ ಅವಕಾಶವಿದೆ. ಇದರಲ್ಲಿ ಸಾಕಷ್ಟು ಉಪಯುಕ್ತ ಸೌಲಭ್ಯಗಳಿವೆ. ಸೈಡ್‌‌ಬಾರ್‍ ಅಪ್ಲಿಕೇಷನ್‌‌ಗಳನ್ನು ಹೊಂದಿದ ಮೊದಲ ಬ್ರೌಸರ್‍ ಇದು. ಯಾವುದೇ ತಂತ್ರಾಂಶದ ಸಹಾಯವಿಲ್ಲದೆ ಈ ಬ್ರೌಸರ್‌‌ನ ಮೂಲಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರೆಯಬಹುದು. ನಿಮ್ಮ ಕಂಪ್ಯೂಟರ್‌‌ನ್ನು ಈ ಬ್ರೌಸರ್‌‌ ಮೂಲಕವೇ ಜಾಲಾಡಬಹುದು. to do list, alerts, stopwatch ಮುಂತಾದ ಸಲಕರಣೆಗಳಿವೆ. ಟ್ವಿಟರ್‍, ಫೇಸ್‌‌ಬುಕ್, ಆರ್ಕುಟ್, ಮುಂತಾದ 1500ಕ್ಕು ಹೆಚ್ಚು ಅಪ್ಲಿಕೇಷನ್‌ಗಳಿವೆ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಎಪಿಕ್ ಬ್ರೌಸರ್‌‌‌‌ನ್ನು ಇಲ್ಲಿಂದ ಇಳಿಸಿಕೊಳ್ಳಬಹುದು(ಫೈಲ್ ಸುಮಾರು 10.6 ಎಂಬಿ ಇರುತ್ತದೆ). ಹೆಚ್ಚಿನ ಮಾಹಿತಿ ಇಲ್ಲಿ ದೊರೆಯುತ್ತದೆ.


-ಪ್ರಸನ್ನ.ಎಸ್.ಪಿ

ನಕಲಿ ಸಿಡಿ/ಡಿವಿಡಿಗಳ ಹಾವಳಿ


ನೀವು ಸಿಟಿ ಮಾರ್ಕೆಟ್‌ಗಳಲ್ಲಿ, ಬಸ್‌‌ಸ್ಟ್ಯಾಂಡ್‌‌ಗಳ ಬಳಿ, ಜನನಿಬಿಡ ರಸ್ತೆಗಳ ಪಕ್ಕ ತಳ್ಳುಗಾಡಿಗಳಲ್ಲಿ ಚಲನಚಿತ್ರಗಳ ಸಿಡಿ ಹಾಗೂ ಡಿವಿಡಿಗಳನ್ನು ಇಟ್ಟು ಮಾರುತ್ತಿರುವವರನ್ನು ನೋಡಿರಬಹುದು. ಹೋಗಿ ವಿಚಾರಿಸಿದರೆ ಒಂದು ಡಿವಿಡಿಗೆ ಸುಮಾರು ಮೂವತ್ತರಿಂದ ಮೂವತ್ತೈದು ರೂಪಾಯಿ ಹೇಳುತ್ತಾರೆ. ಸ್ವಲ್ಪ ಚೌಕಾಶಿ ಮಾಡಿದರೆ ಇಪ್ಪತೈದು ರೂಪಾಯಿಗೂ ಕೊಡಬಹುದು. ಇಷ್ಟು ಕಡಿಮೆ ದುಡ್ಡಿಗೆ ಡಿವಿಡಿ ಕೊಡುತ್ತಾರಲ್ಲ ಎಂದು ಆಶ್ಚರ್ಯವಾಗುತ್ತದೆಯಲ್ಲವೇ? ಅದರಲ್ಲೂ ಒಂದೇ ಡಿವಿಡಿಯಲ್ಲಿ ಹೊಚ್ಚ ಹೊಸ ನಾಲ್ಕೈದು ಚಲನಚಿತ್ರಗಳು ಇರುತ್ತದೆ. ಆದರೆ ನಿಜವಾದ ಸಂಗತಿ ಏನೆಂದರೆ ಅವು ಯಾವುವೂ ಅಸಲಿ ಡಿವಿಡಿಗಳಲ್ಲ! ಒಂದೋ ಅಸಲಿ ಸಿಡಿ/ಡಿವಿಡಿಯನ್ನು ಕಾಪಿ ಮಾಡಿರುತ್ತಾರೆ ಅಥವಾ ಆ ಚಲನಚಿತ್ರಗಳು ಥಿಯೇಟರ್‍ ಪ್ರಿಂಟ್ ಆಗಿರುತ್ತದೆ. ಹೊರಗಿನ ಕವರ್‍ ಮಾತ್ರ ಥೇಟ್ ಅಸಲಿಯಂತೆಯೇ ಇರುತ್ತದೆ. ಆದರೆ ಒಳಗಿನ ಡಿವಿಡಿ ಮಾತ್ರ ನಕಲಿ! ಅಲ್ಲದೇ ಈ ಡಿವಿಡಿಗಳ ದೃಶ್ಯದ ಗುಣಮಟ್ಟವೂ ಅಷ್ಟೊಂದು ಚೆನ್ನಾಗಿರುವುದಿಲ್ಲ. ಈ ಡಿವಿಡಿಗಳನ್ನು ಕೊಳ್ಳುವವರು ನೀಡುವ ಕಾರಣವೇನೆಂದರೆ, "ಥಿಯೇಟರ್‌‌ನಲ್ಲಿ 35 ರೂಪಾಯಿ ಕೊಟ್ಟರೆ ಒಂದು ಸಿನೆಮಾ ಮಾತ್ರ ನೋಡುವುದಕ್ಕಾಗುತ್ತದೆ. ಆದರೆ ಅದೇ ದುಡ್ಡಿನಲ್ಲಿ ಒಂದು ಡಿವಿಡಿ ಕೊಂಡರೆ ನಾಲ್ಕೈದು ಸಿನೆಮಾ ನೋಡಬಹುದು. ಜೊತೆಗೆ ಥಿಯೇಟರ್‌‌‌ನಲ್ಲಾದರೆ ಒಮ್ಮೆ ಮಾತ್ರ ಸಿನೆಮಾ ನೋಡಬಹುದು. ಆದರೆ ಒಂದು ಡಿವಿಡಿ ಕೊಂಡರೆ ಎಷ್ಟು ಬಾರಿ ಬೇಕಾದರೂ ಸಿನೆಮಾ ನೋಡಬಹುದು". ಆದರೆ ನಿಜವಾದ ಸಂಗತಿ ಏನೆಂದರೆ, ಈ ಡಿವಿಡಿಗಳನ್ನು ಒಂದೆರಡು ಬಾರಿ ಪ್ಲೇ ಮಾಡಿದರೆ ಮತ್ತೆ ಪ್ಲೇ ಆಗುವುದೇ ಇಲ್ಲ. ಏಕೆಂದರೆ ಅವುಗಳಲ್ಲಿ ಬಳಸುವ ಡಿವಿಡಿಯ ಗುಣಮಟ್ಟ ಅಷ್ಟು ಕಳಪೆಯಾಗಿರುತ್ತದೆ. ನನ್ನ ಸ್ನೇಹಿತನೊಬ್ಬ ಈ ರೀತಿಯ ಡಿವಿಡಿಯೊಂದನ್ನು ಪ್ಲೇ ಮಾಡಲು ಹೋದಾಗ, ಆ ಡಿವಿಡಿಯು ಡ್ರೈವ್‌ನೊಳಗೆ ಸಿಡಿದು ಡ್ರೈವ್ ಹಾಳಾಗಿ ಹೋಗಿತ್ತು. ಮತ್ತೆ ಆ ಡಿವಿಡಿ ಡ್ರೈವ್‌ನ್ನು ಸರಿಪಡಿಸಲು 250 ರೂಪಾಯಿ ಖರ್ಚು ಮಾಡಿದ.

ಈ ರೀತಿಯ ನಕಲಿ ಸಿಡಿ/ಡಿವಿಡಿಗಳನ್ನು ಕೊಳ್ಳುವುದರಿಂದ ಚಲನ ಚಿತ್ರೋದ್ಯಮಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಜನರು ಥಿಯೇಟರ್‌ನಲ್ಲಿ ಸಿನೆಮಾ ನೋಡದೆ ನಕಲಿ ಡಿವಿಡಿಗಳನ್ನು ಖರೀದಿಸಿ ಸಿನೆಮಾ ನೋಡಿದರೆ, ಸಿನೆಮಾ ನಿರ್ಮಿಸಿದವರಿಗೆ ಲಾಭವಾಗುವುದಾದರೂ ಹೇಗೆ? ಶುಕ್ರವಾರ ರಿಲೀಸ್ ಆದ ಸಿನೆಮಾದ ಡಿವಿಡಿಗಳು ಶನಿವಾರ ಸಂಜೆ ಅಥವಾ ಭಾನುವಾರದ ಹೊತ್ತಿಗೆಲ್ಲಾ ದೊರೆಯುತ್ತದೆ ಎಂದರೆ ನಕಲಿ ಡಿವಿಡಿಗಳನ್ನು ತಯಾರಿಸುವ ದಂಧೆ ಯಾವ ರೀತಿ ಬೆಳೆದಿರಬಹುದು ನೀವೇ ಊಹಿಸಿ. ಇಂತಹ ಡಿವಿಡಿಗಳನ್ನು ಖರೀದಿಸುವ ಜನರಿಂದಲೇ ನಕಲಿ ಡಿವಿಡಿಗಳ ಹಾವಳಿ ಹೆಚ್ಚಾಗುತ್ತದೆ. ಮುಂಚೆಯೆಲ್ಲಾ ಕ್ಲಾಸ್ ಬಂಕ್ ಮಾಡಿ ಥಿಯೇಟರ್‌‌ಗೆ ಹೋಗುತ್ತಿದ್ದ ಕಾಲೇಜು ಹುಡುಗರು ಈಗ, "ಎರಡು ದಿನ ಬಿಟ್ರೆ ಸಿಡಿ ಸಿಗುತ್ತೆ, ಆಮೇಲೆ ನೋಡಿದ್ರಾಯ್ತು ಬಿಡು" ಅನ್ನೋಕೆ ಶುರು ಮಾಡಿದ್ದಾರೆ! ಎಲ್ಲರೂ ಇದೇ ರೀತಿ ಯೋಚನೆ ಮಾಡೋಕೆ ಪ್ರಾರಂಭಿಸಿದರೆ ಚಿತ್ರೋದ್ಯಮ ನಷ್ಟದ ಹಾದಿ ಹಿಡಿಯುವುದು ಖಚಿತ.

ನಕಲಿ ಸಿಡಿ/ಡಿವಿಡಿ ಹಾವಳಿಯನ್ನು ನಿಯಂತ್ರಿಸುವ ಕೆಲಸ ನಮ್ಮಿಂದಲೇ ಆಗಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಇಂತಹ ಡಿವಿಡಿಗಳನ್ನು ಕೊಳ್ಳಬಾರದು. ಹೊಸ ಚಲನಚಿತ್ರಗಳನ್ನು ಥಿಯೇಟರ್‌ಗಳಲ್ಲಿಯೇ ನೋಡಬೇಕು. ಡಿವಿಡಿಗಳನ್ನು ಕೊಳ್ಳುವುದಿದ್ದರೆ ಅಸಲಿ ಡಿವಿಡಿಗಳನ್ನೇ ಕೊಳ್ಳಬೇಕು. ಪೈರಸಿಯನ್ನು ತಡೆಗಟ್ಟುವ ಉದ್ದೇಶದಿಂದ ಮೋಸರ್‌‌‌ಬೇರ್‍ ಮುಂತಾದ ಕಂಪೆನಿಗಳು ಕಡಿಮೆ ಬೆಲೆಗೆ ಅಸಲಿ ಸಿಡಿ/ಡಿವಿಡಿಗಳನ್ನು ಕೊಡುತ್ತವೆ. ಅಂತಹ ಒರಿಜಿನಲ್ ಸಿಡಿ/ಡಿವಿಡಿಗಳನ್ನು ಖರೀದಿಸಬಹುದು. ನಕಲಿ ಸಿಡಿ/ಡಿವಿಡಿಗಳನ್ನು ತಯಾರಿಸುವವರ ಬಗ್ಗೆ ಮಾಹಿತಿ ಗೊತ್ತಿದ್ದರೆ, ಸಾಧ್ಯವಾದರೆ ಪೊಲೀಸರಿಗೆ ಸುಳಿವು ನೀಡಬಹುದು. ಈ ಕ್ರಮಗಳನ್ನು ಅನುಸರಿಸಿದರೆ ತಾನಾಗಿಯೇ ನಕಲಿ ಡಿವಿಡಿ ಎಂಬ ಪಿಡುಗು ಕಡಿಮೆಯಾಗುತ್ತದೆ, ಹಾಗೆಯೇ ಚಿತ್ರ ನಿರ್ಮಾಪಕರಿಗೂ ನಷ್ಟವಾಗುವುದು ತಪ್ಪುತ್ತದೆ.


Monday, August 2, 2010

ಬ್ಲಾಗ್‌ಗಳನ್ನು ಫಾಲೋ ಮಾಡುವ ವಿಧಾನ

ನಿಮಗೆ ಇಷ್ಟವಾದ ಬ್ಲಾಗ್‌ಗಳನ್ನು ಫಾಲೋ ಮಾಡಬೇಕೆ? ಹಾಗಾದರೆ ಈ ರೀತಿ ಮಾಡಿ. ಮೊದಲು ನಿಮ್ಮ ಬ್ಲಾಗರ್‍ ಅಕೌಂಟಿಗೆ ಲಾಗಿನ್ ಆಗಿ. ಡ್ಯಾಷ್‌‌ಬೋರ್ಡ್‌ನಲ್ಲಿ ಕೆಳಗಡೆ Reading List ಎಂದು ಇರುತ್ತದೆ. ಅಲ್ಲಿ Blogs I'm Following ಎಂಬ ಆಯ್ಕೆಯ ಕೆಳಗೆ ADD ಎಂಬ ಬಟನ್ ಇರುತ್ತದೆ. ಅದನ್ನು ಕ್ಲಿಕ್ಕಿಸಿ.
 


ನಂತರ Add from URL ಎಂಬಲ್ಲಿ ನೀವು ಫಾಲೋ ಮಾಡಬೇಕಾದ ತಾಣದ ವಿಳಾಸ ನೀಡಿ, NEXT ಬಟನ್ ಒತ್ತಿರಿ.
 


ಅಲ್ಲಿ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಎರಡು ಆಯ್ಕೆ ಇರುತ್ತದೆ. ಅನಾಮಿಕರಾಗಿ ಫಾಲೋ ಮಾಡಬೇಕಿದ್ದರೆ Follow anonymously ಎಂಬುದನ್ನು ಆರಿಸಿ. ಇಲ್ಲದಿದ್ದರೆ Follow publicly as ನ್ನು ಆರಿಸಿ Follow ಒತ್ತಿರಿ.
 


ನಂತರ ನಿಮ್ಮ ಡ್ಯಾಷ್‌‌ಬೋರ್ಡ್‌ನಲ್ಲಿ ಆ ಬ್ಲಾಗ್‌ನ ಹೊಸ ಪೋಸ್ಟ್‌ಗಳ ಒಂದೆರಡು ಸಾಲು ಕಂಡುಬರುತ್ತದೆ. ಪೂರ್ತಿ ಲೇಖನ ಓದಬೇಕೆಂದರೆ ಆ ಲೇಖನದ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ ಓದಬಹುದು.
 



ಅಥವಾ ಇನ್ನೊಂದು ವಿಧಾನದಲ್ಲಿ ಬ್ಲಾಗ್‌‌ಗಳನ್ನು ಫಾಲೋ ಮಾಡಬಹುದು. ನೀವು ಫಾಲೋ ಮಾಡಬೇಕಾದ ಬ್ಲಾಗ್‌ಗೆ ಭೇಟಿ ಕೊಡಿ. ಅಲ್ಲಿ ಕಂಡುಬರುವ Follow ಬಟನ್ ಒತ್ತಿರಿ.




ನಂತರ ಅಲ್ಲಿ ಗೂಗಲ್ ಅಥವಾ ನಿಮ್ಮ ಇತರ ಅಕೌಂಟ್ ಇರುವ ಚಿತ್ರದ ಮೇಲೆ ಕ್ಲಿಕ್ ಮಾಡಿ. 
 


ನಿಮ್ಮ ಯೂಸರ್‍ ನೇಮ್ ಹಾಗೂ ಪಾಸ್‌‌ವರ್ಡ್ ನೀಡಿ ಲಾಗಿನ್ ಆಗಿ.
 



ನಂತರ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಆಯ್ಕೆಯಲ್ಲಿ ಒಂದನ್ನು ಆರಿಸಿ Follow ಬಟನ್ ಕ್ಲಿಕ್ ಮಾಡಿ.







-ಪ್ರಸನ್ನ.ಎಸ್.ಪಿ

ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ

ನಿಮ್ಮ ಬಳಿ ನೋಕಿಯ ಕಲರ್‍ ಬೇಸಿಕ್ ಮೊಬೈಲ್ (ಉದಾ: nokia1600, nokia1208) ಇದ್ದರೆ ಇಲ್ಲೊಂದು ತಮಾಷೆ ಇದೆ ನೋಡಿ. ಕೀ ಪ್ಯಾಡ್‌‌ನಲ್ಲಿ *#5513# ಒತ್ತಿರಿ, ತಕ್ಷಣ ಸ್ಕ್ರೀನ್ ಉಲ್ಟಾ ಆಗುತ್ತದೆ! ಅಂದರೆ ಮೊಬೈಲನ್ನು ತಲೆಕಳಗೆ ಹಿಡಿದು ನೋಡಿದರೆ ಸ್ಕ್ರೀನ್ ಸರಿಯಾಗಿ ಕಾಣುತ್ತದೆ! *#5512# ಒತ್ತಿದರೆ ಸ್ಕ್ರೀನ್ ಎಡಕ್ಕೆ ತಿರುಗುತ್ತದೆ. *#5514# ಒತ್ತಿದರೆ ಸ್ಕ್ರೀನ್ ಬಲಕ್ಕೆ ತಿರುಗುತ್ತದೆ. ಮತ್ತೆ ಸ್ಕ್ರೀನ್ ಸರಿಹೋಗಬೇಕಾದರೆ *#5511# ಒತ್ತಬೇಕು. ಹೈ ಎಂಡ್ ಮಾಡೆಲ್‌ಗಳಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಬೇಸಿಕ್ ಮಾಡೆಲ್‌ಗಳಲ್ಲಿ ಮಾತ್ರ ಇದು ಸಾಧ್ಯ. ಇದರ ಉಪಯೋಗ ಏನೆಂದು ಕೇಳಬೇಡಿ, ಏಕೆಂದರೆ ನನಗೂ ಇದರ ಉಪಯೋಗ ಗೊತ್ತಿಲ್ಲ! :) ಸುಮ್ಮನೇ ತಮಾಷೆಗೆ ಸ್ಕ್ರೀನ್ ಉಲ್ಟಾ ಮಾಡಿ ಆನಂದಿಸಬಹುದು.




-ಪ್ರಸನ್ನ.ಎಸ್.ಪಿ