Thursday, July 29, 2010

ನಿಮ್ಮ ರೋಲ್ ಮಾಡೆಲ್ ಯಾರು?

ನಿಮ್ಮ ರೋಲ್ ಮಾಡೆಲ್ ಯಾರು ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಈ ರೀತಿ ಮಾಡಿ,

  • ಮೊದಲು 1 ರಿಂದ 9ರವರೆಗಿನ ನಿಮಗೆ ಇಷ್ಟ ಬಂದ ಅಂಕಿಯನ್ನು ಇಟ್ಟುಕೊಳ್ಳಿ.
  • ಅದನ್ನು 3ರಿಂದ ಗುಣಿಸಿ,
  • ಬಂದ ಉತ್ತರಕ್ಕೆ 3ನ್ನು ಸೇರಿಸಿ 3ರಿಂದ ಗುಣಿಸಿ (ನೀವು ಕ್ಯಾಲ್ಕ್ಯುಲೇಟರ್‍ ಹುಡುಕುವ ವರೆಗೆ ನಾನು ಕಾಯುತ್ತೇನೆ.) ,
  • ನೀವೀಗ 2 ಅಥವಾ 3 ಅಂಕಿಗಳುಳ್ಳ ಸಂಖ್ಯೆಯನ್ನು ಪಡೆಯುತ್ತೀರಿ(ಉದಾ:31). ಆ ಸಂಖ್ಯೆಯ ಎಲ್ಲ ಅಂಕಿಗಳನ್ನು ಕೂಡಿರಿ(ಉದಾ 3+1). ನೀವೀಗ ಒಂದು ಒಂಟಿ ಅಂಕಿ [ಸಿಂಗಲ್ ಡಿಜಿಟ್ ನಂಬರ್‍] ಪಡೆದಿರುತ್ತೀರಿ (ಉದಾ:4) . ಈಗ ಕೆಳಗಡೆ ಆ ಅಂಕಿಯಲ್ಲಿ ಯಾರ ಹೆಸರು ಇದೆ ಎಂದು ನೋಡಿ, ಅವರೇ ನಿಮ್ಮ ರೋಲ್ ಮಾಡೆಲ್ ಆಗಿರುತ್ತಾರೆ. 

.

.
.
.
.
.
.
.
.
.
.
.
.
.
.
.
.
.

1. ಐನ್‌‌ಸ್ಟೈನ್
2. ನೆಲ್ಸನ್ ಮಂಡೇಲ
3. ಸದ್ದಾಂ ಹುಸೇನ್
4. ಸಚಿನ್ ತೆಂಡೂಲ್ಕರ್‍
5. ಬಿಲ್ ಗೇಟ್ಸ್
6. ಮಹಾತ್ಮಾ ಗಾಂಧಿ
7. ಅಲೆಕ್ಸಾಂಡರ್‍
8. ಹಿಟ್ಲರ್‍
9. ಪ್ರಸನ್ನ.ಎಸ್.ಪಿ
10. ಬರಾಕ್ ಒಬಾಮ


Tuesday, July 27, 2010

ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?


(ಇದು ನನ್ನ ಮೊದಲ ಕವನ)

ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?

ಛತ್ರಿ ಹಿಡಿದು ಹೋದರೆ ನಡೆಯಲು ಬಿಡದ ಮಳೆ-ಗಾಳಿ
ದಾರಿ ಬಿಟ್ಟು ಇಳಿದರೆ ಮುತ್ತಿಕ್ಕಿ ರಕ್ತ ಹೀರುವ ಇಂಬಳಗಳು
ಮುಳುಗಿದ ಸೇತುವೆಯಾಚೆ ನಿಲ್ಲುವ ಅಸಹಾಯಕ ಬಸ್ಸುಗಳು
ಸೊಂಟದ ಮೂಳೆ ಮುರಿಸುವ ಪಾಚಿಗಟ್ಟಿದ ಅಂಗಳ
ಇಲ್ಲಿಗೇಕೆ ಬಂದು ಸಿಕ್ಕಿಹಾಕಿಕೊಂಡೆ ನೀನು?

ಗಾಳಿಗೆ ಬಾಲ ತುಂಡರಿಸಿಕೊಂಡು ಸಾಯುವ ಫೋನು
ಗುಡುಗಿನ ಶಬ್ಧಕ್ಕೆ ಹೆದರಿ ಓಟ ಕೀಳುವ ಕರೆಂಟು
ನೀರು ಬೀಳಿಸಿಕೊಂಡು ಸುಟ್ಟುಹೋಗುವ ಮೂರ್ಖ(ರ) ಪೆಟ್ಟಿಗೆಗಳು
ತೂತು ಮಾಡಿನ ಕೆಳಗಿಟ್ಟ ಪಾತ್ರೆಗಳ ಅಹೋರಾತ್ರಿ ಸಂಗೀತ
ಇದನನುಭವಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

ದುಡ್ಡು ಕೊಟ್ಟರೂ ಗದ್ದೆ ಕೆಲಸಕ್ಕೆ ಬಾರದ ಕೆಲಸಗಾರರು
ಅಡಿಕೆಯ ಚಿಗುರನ್ನೂ ಸುಮ್ಮನೆ ಬಿಡದ ವಾನರ ಸೈನ್ಯ
ಎರಡು ತಿಂಗಳಿಗೋಸ್ಕರ ವರ್ಷವಿಡೀ ಸಾಕಬೇಕಾದ ಎತ್ತುಗಳು
ಮಳೆ ಬಂದರೆ ಮಣ್ಣಿನ ಮುದ್ದೆಯಾಗುವ ಗೋಡೆ-ಅಡಿಪಾಯಗಳು
ಈ ಕಷ್ಟವ ನೋಡಲೆಂದೇ ಇಲ್ಲಿಗೆ ಬಂದೆಯಾ ನೀನು?

ಕಾಯಿ ಬೀಳಿಸಿ ಹೆಂಚು ಒಡೆಯುವ ತೆಂಗಿನಮರ
ಹೊಂಡ ತಪ್ಪಿಸುವ ಸೈಕಲ್ಲುಗಳಿಗೆ ಚರಂಡಿ ತೋರಿಸುವ ರಸ್ತೆಗಳು
ಸಂಜೆಗೆ ಬರುವ ಬೆಳಗ್ಗಿನ ಹಳಸಲು ನ್ಯೂಸ್ ಪೇಪರ್ರು
ಬಿಸಿಲಿಗೆ ಬಟ್ಟೆ ಹಾಕುವುದನ್ನೇ ಕಾಯುವ ಮಾಯಕಾರ ಮಳೆ
ಇದನ್ನೆಲ್ಲಾ ತಾಳಿಕೊಳ್ಳಲೆಂದೇ ಇಲ್ಲಿಗೆ ಬಂದೆಯಾ ನೀನು?

ಮಳೆ-ಗಾಳಿ, ಕೊಟ್ಟಿಗೆಯ ಥಂಡಿಗೆ ನರಳುವ ಜಾನುವಾರುಗಳು
ಹಜಾರದಲ್ಲಿಟ್ಟ ಮರದ ಅಕ್ಕಿಯ ಪಥಾಸನ್ನೂ ಬಿಡದ ಹೆಗ್ಗಣ
ತನ್ನ ಮುಂದೆ ಹೋದ ಇಲಿಯನ್ನು ನೋಡಿ ಸುಮ್ಮನಾದ ಸೋಮಾರಿ ಬೆಕ್ಕು
ಹಾವು ಇಲಿ ಹಲ್ಲಿ ಕಪ್ಪೆಗಳ ಮಿನಿ ಮೃಗಾಲಯದಲ್ಲಿ,
ವಾಸಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

(ಕೊನೆಯವರೆಗೆ ತಾಳ್ಮೆಯಿಂದ ಓದಿದ್ದಕ್ಕೆ ನಿಮಗೆ ಧನ್ಯವಾದಗಳು. ಪೂರ್ತಿ ಕವನ ಇಷ್ಟವಾಗದಿದ್ದರೂ ಕೆಲವೊಂದು ಸಾಲುಗಳು ನಿಮಗೆ ಮೆಚ್ಚುಗೆಯಾಗುತ್ತವೆ ಎಂದು ನಂಬಿದ್ದೇನೆ. ನಿಮಗೆ ಇಷ್ಟವಾದ ಸಾಲುಗಳನ್ನು ತಿಳಿಸಿ. ಇದು ನನ್ನ ಕವನ ಬರೆಯುವ ಮೊದಲ ಪ್ರಯತ್ನವಾದ್ದರಿಂದ ನಿಮ್ಮೆಲ್ಲರ ಸಲಹೆ ಸೂಚನೆಗಳು ನನಗೆ ಅಮೂಲ್ಯ. ಅದನ್ನು ತಿಳಿಸುವಿರೆಂಬ ನಂಬಿಕೆಯಲ್ಲಿರುವ,
-ಪ್ರಸನ್ನ.ಶಂಕರಪುರ  )

ಹುರುಳಿಸಾರು+ಸ್ವಲ್ಪ ಬೆಣ್ಣೆ+ಒಂದು ಹಪ್ಪಳ= ಅದ್ಭುತ ರುಚಿ!


ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ  ತೊಂದರೆಯಾಗದಿರಲಿ ಎಂಬುದೇ ಹುರುಳಿ ನೀಡುವ ಉದ್ದೇಶ. ಹಾಗೆ ಹುರುಳಿಯನ್ನು  ಬೇಯಿಸುವಾಗ ಸಿಗುವ ಕಂದು ರಸವೇ ಈ ಹುರುಳಿ ಕಟ್ಟು. ದಿನವಿಡೀ ತಣ್ಣನೆಯ ನೀರಿನಲ್ಲಿರುವ ಎತ್ತುಗಳ ಪಾದ ಮೆದುವಾಗಿರುತ್ತದೆ ಎಂಬ ಕಾರಣಕ್ಕಾಗಿ ಬಿಸಿಯಾಗಿರುವ ಹುರುಳಿಕಟ್ಟನ್ನು ಎತ್ತುಗಳ ಕಾಲಿಗೆ ಕೊಯ್ಯುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಹುರುಳಿಕಟ್ಟು ಸಾರು ಮಾಡುವುದಕ್ಕೆ ಬಳಕೆಯಾಗುತ್ತದೆ. ಅನ್ನ, ಬಿಸಿ ಬಿಸಿ ಹುರುಳಿ ಸಾರು, ಒಂದು ಮುದ್ದೆ ಬೆಣ್ಣೆ, ಮೇಲೊಂದು ಹಲಸಿನಕಾಯಿ ಹಪ್ಪಳವಿದ್ದರೆ, ಆಹಾ! ಅದಕ್ಕಿಂತ ರುಚಿಕರ ಊಟ ಯಾವುದೇ ಸ್ಟಾರ್‍ ಹೋಟೆಲ್‌ಗಳಲ್ಲೂ ದೊರೆಯುವುದಿಲ್ಲ. ಹುರುಳಿ ಬೇಯಿಸುವ ಮನೆಗಳಲ್ಲಿ ಪ್ರತಿದಿನ ಹುರುಳಿಕಟ್ಟಿಗಾಗಿ ಐದಾರು ಕ್ಯಾರಿಯರ್‌ಗಳು ಕಾದಿರುತ್ತವೆ ಎಂದರೆ ಅದರ ಬೇಡಿಕೆ ಎಷ್ಟಿರಬಹುದು ನೀವೇ ಊಹಿಸಿ. ಮಲೆನಾಡಿಗರು ಮಳೆಗಾಲದಲ್ಲಿ ದೇಹವನ್ನು ಥಂಡಿಯಿಂದ ಕಾಪಾಡಿಕೊಳ್ಳಲು ಹುರುಳಿ ಸಾರನ್ನು ಪ್ರಮುಖವಾಗಿ ಬಳಸುತ್ತಾರೆ. ಅಸ್ತಮಾ ಇರುವವರು ಹುರುಳಿ ಸಾರು ಬಳಸಿದರೆ ಒಳ್ಳೆಯದು ಎನ್ನುತ್ತಾರೆ ಹಿರಿಯರು.

ಇಷ್ಟೆಲ್ಲಾ ಕೇಳಿದ ನಂತರ ನಿಮಗೂ ಹುರುಳಿ ಸಾರು ತಿನ್ನಬೇಕೆನ್ನುವ ಆಸೆ ಉಂಟಾಗಿದ್ದರೆ ಈಗಲೇ ಹುರುಳಿ ಬೇಯಿಸಲು ಶುರುಮಾಡಿ. ಸಾರು ಮಾಡುವುದನ್ನು ನಾನು ಹೇಳಿಕೊಡುತ್ತೇನೆ.

ಹುರುಳಿಕಟ್ಟು ತಯಾರಿಸುವ ವಿಧಾನ:
ಮೊದಲು ಕ್ಲೀನ್ ಮಾಡಿದ ಹುರುಳಿಯನ್ನು ನೀರು ಹಾಕಿ ಬೇಯಿಸಿಕೊಳ್ಳಿ. ಹುರುಳಿಯನ್ನು ಕುಕ್ಕರ್‌ನಲ್ಲಿ ಬೇಯಿಸಬಹುದು ಅಥವಾ ಹಾಗೆಯೇ ಬೇಯಿಸಬಹುದು. ಕುಕ್ಕರ್‌ನಲ್ಲಿ ಬೇಯಿಸುವುದಾದರೆ ಮೊದಲು ಹುರುಳಿಗೆ ನೀರು ಸೇರಿಸಿ ನಾಲ್ಕು ಕೂಗು ಕೂಗಿಸಬೇಕು. ತಣ್ಣಗಾದ ನಂತರ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮತ್ತೊಂದು ನಾಲ್ಕು ಕೂಗು ಕೂಗಿಸಬೇಕು. ಹಾಗೆಯೇ ಬೇಯಿಸುವುದಾದರೆ ಉಪ್ಪು ಹಾಕುವುದು ಬೇಡ. ಆದರೆ ತುಂಬ ಹೊತ್ತು ಬೇಯಿಸಬೇಕು. ನಂತರ ಕಂಡಿ ಇರುವ ಪಾತ್ರೆ ಬಳಸಿ ಹುರುಳಿ ಹಾಗೂ ಕಟ್ಟನ್ನು ಬೇರ್ಪಡಿಸಬಹುದು. ಹುರುಳಿ ಕಟ್ಟು ಗಾಢ ಕಂದು ಬಣ್ಣವಿರುತ್ತದೆ.

ಹುರುಳಿ ಸಾರು ಮಾಡುವ ವಿಧಾನ:
ಮೊದಲು ಕೊತ್ತಂಬರಿ(ಧನಿಯಾ), ಜೀರಿಗೆ, ಸ್ವಲ್ಪ ಮೆಂತ್ಯ, ಇಂಗು, ಸಾಸಿವೆ, ಕರಿಬೇವು, ಮೆಣಸಿನಕಾಯಿ ಹುರಿದುಕೊಳ್ಳಿ. ಅದನ್ನು ತೆಂಗಿನತುರಿಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.(ಬೆಳ್ಳುಳ್ಳಿ ತಿನ್ನುವವರು ಅದನ್ನೂ ಸೇರಿಸಬಹುದು). ನಂತರ ಹುರುಳಿಕಟ್ಟಿಗೆ ಉಪ್ಪು, ಬೆಲ್ಲ, ಹುಣಸೆ ಹಣ್ಣು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ರುಬ್ಬಿಕೊಂಡ ಮಿಶ್ರಣವನ್ನು(ಮಸಾಲೆಯನ್ನು) ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದ್ದ ನಂತರ ಅದಕ್ಕೆ ತುಪ್ಪದಲ್ಲಿ ಸಾಸಿವೆಯೊಂದಿಗೆ ಒಗ್ಗರಣೆ ನೀಡಬೇಕು. ಇಷ್ಟು ಮಾಡಿದರೆ ಹುರುಳಿ ಸಾರು ರೆಡಿ. ನಂತರ ಅನ್ನಕ್ಕೆ ಈ ಸಾರು ಹಾಗೂ ಒಂದು ಸ್ವಲ್ಪ ಬೆಣ್ಣೆ ಸೇರಿಸಿ ಊಟ ಮಾಡಿದರೆ ಸೊಗಸಾಗಿರುತ್ತದೆ. ಜೊತೆಗೊಂದು ಹಲಸಿನಕಾಯಿ ಹಪ್ಪಳವಿದ್ದರೆ ಅದರ ಮಜಾನೇ ಬೇರೆ.

ಹುರುಳಿ ಪಲ್ಯ ಮಾಡುವ ವಿಧಾನ:
ಹುರುಳಿಕಟ್ಟು ತೆಗೆಯುವಾಗ ಬೇಯಿಸಿದ ಹುರುಳಿಯನ್ನು ಪಲ್ಯ ಮಾಡಲು ಬಳಸಬಹುದು. ಪಲ್ಯ ಮಾಡಲು ಮೊದಲು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಬಾಣಲೆಯಲ್ಲಿ ಬಾಡಿಸಿಕೊಳ್ಳಬೇಕು. ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಉಪ್ಪು, ಹುಣಸೆಹಣ್ಣು, ಮೆಣಸಿನ ಪುಡಿ, ಕರಿಬೇವು ಸೇರಿಸಿ ಹುರಿಯಬೇಕು. ನಂತರ ಅದಕ್ಕೆ ಬೆಂದ ಹುರುಳಿಯನ್ನು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿದರೆ ಹುರುಳಿ ಪಲ್ಯ ತಯಾರು. ಇದನ್ನು ಚಪಾತಿ, ರೊಟ್ಟಿ, ದೋಸೆಯೊಂದಿಗೆ ಸೇರಿಸಿಕೊಂಡು ತಿನ್ನಬಹುದು. ಅನ್ನದೊಂದಿಗೂ ಸೇವಿಸಬಹುದು.

ನೀವೂ ಹುರುಳಿ ಸಾರು ತಯಾರಿಸಿ ಸವಿದು ನೋಡಿ. ಏನಾದರೂ ಅನುಮಾನಗಳಿದ್ದರೆ ಕೇಳಿ. ಹಾಗೆಯೇ ಸಾರು ಹೇಗಿತ್ತು ಎಂಬುದನ್ನು ನಮಗೂ ತಿಳಿಸಲು ಮರೆಯದಿರಿ. ಮುಂದಿನ ದಿನಗಳಲ್ಲಿ ಮಲೆನಾಡಿನ ಇನ್ನಷ್ಟು ಅಡುಗೆಗಳನ್ನು ಮಾಡುವುದು ಹೇಗೆಂದು ಹೇಳಿಕೊಡುತ್ತೇನೆ. ನೀವೂ ಅವುಗಳನ್ನು ತಯಾರಿಸಿಕೊಂಡು ಸವಿಯಬಹುದು.


ಧನ್ಯವಾದಗಳೊಂದಿಗೆ,
-ಪ್ರಸನ್ನ.ಶಂಕರಪುರ

ಟೆಕ್-ಕನ್ನಡ ಎಂಬ ಹೊಸ ತಾಣ


ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಪ್ರಕಟಿಸುವ ಉದ್ದೇಶವಿದೆ. ಹಾಗೂ ಅಂತರ್ಜಾಲದಲ್ಲಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುವ ತಾಣಗಳ ಲಿಂಕ್‌ನ್ನು ಟೆಕ್-ಕನ್ನಡದಲ್ಲಿ ನೀಡಲಾಗುತ್ತದೆ. ನೀವೂ ಕೂಡ ಈ ತಾಣದಲ್ಲಿ ಲೇಖನಗಳನ್ನು ಬರೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ನೋಡಿ.

ಧನ್ಯವಾದಗಳೊಂದಿಗೆ,

-ಪ್ರಸನ್ನ.ಶಂಕರಪುರ

ಬಿ.ಎಸ್.ಎನ್.ಎಲ್ ಬ್ರಾಡ್‌ಬ್ಯಾಂಡ್‌‌ನಲ್ಲಿ ನನಗಾಗುತ್ತಿರುವ ತೊಂದರೆ

ಈಚೆಗೆ ಯಾಕೋ ಬಿ.ಎಸ್.ಎನ್.ಎಲ್ ಬ್ರಾಡ್‌ಬ್ಯಾಂಡ್ ತುಂಬಾ ತೊಂದರೆ ಕೊಡುತ್ತಿದೆ. ಪದೇ ಪದೇ ಡಿಸ್‌‌ಕನೆಕ್ಟ್ ಆಗುತ್ತದೆ. ಒಂದು ನಿಮಿಷದಲ್ಲಿ ಐದಾರುಬಾರಿ ಹೀಗಾದರೆ ಏನನ್ನಿಸಬೇಡ. ಬ್ರಾಡ್‌ಬ್ಯಾಂಡ್ ಬಗ್ಗೆಯೇ ಜಿಗುಪ್ಸೆ ಬಂದುಬಿಟ್ಟಿದೆ. ಅಲ್ಲದೇ ಮುಂಚಿನಷ್ಟು ವೇಗವೂ ಇಲ್ಲ. ಹಳೆ ಗಂಡನ ಪಾದವೇ ಗತಿ ಅಂತ ಡಯಲ್-ಅಪ್ ಕನೆಕ್ಷನ್ ಉಪಯೋಗಿಸುತ್ತಿದ್ದೇನೆ. ಅದು ಸ್ವಲ್ಪ ನಿಧಾನವಾದರೂ ಪದೇ ಪದೇ ಡಿಸ್‌ಕನೆಕ್ಟ್ ಆಗುವ ತೊಂದರೆ ಇರುವುದಿಲ್ಲ. ಈ ಬಗ್ಗೆ ಇನ್ನೂ ಬಿ.ಎಸ್.ಎನ್.ಎಲ್‌ ಗೆ ದೂರು ನೀಡಿಲ್ಲ. ಇವತ್ತು ಅಪ್ಪ ದೂರು ನೀಡಬೇಕು ಎನ್ನುತ್ತಿದ್ದರು. ಇದು ನಮಗೆ ಮಾತ್ರ ಆಗಿರುವ ತೊಂದರೆಯೇ ಅಥವಾ ಬಿ.ಎಸ್.ಎನ್.ಎಲ್ ಬ್ರಾಡ್‌ಬ್ಯಾಂಡ್ ಬಳಸುತ್ತಿರುವ ಎಲ್ಲರಿಗೂ ಹೀಗಾಗುತ್ತಿದೆಯೇ ಎಂದು ಗೊತ್ತಿಲ್ಲ. ನಿಮಗೂ ಇದೇ ರೀತಿಯ ತೊಂದರೆಯಾಗುತ್ತಿದ್ದರೆ ತಿಳಿಸಿ. ಹಾಗು ಇದಕ್ಕೇನಾದರೂ ಪರಿಹಾರವಿದ್ದರೆ ಅದನ್ನೂ ಹೇಳಿ.

-ಪ್ರಸನ್ನ.ಶಂಕರಪುರ