Thursday, January 13, 2011

ನನ್ನ ನವಿಲು



 ನನ್ನ ನವಿಲೆ ನನ್ನ ನವಿಲೆ
    ಬಾರೆ ಇಲ್ಲಿಗೆ

ಅಂಕು ಡೊಂಕು ಹೆಜ್ಜೆ ಹಾಕಿ
    ಹೊರಟೆ ಎಲ್ಲಿಗೆ?

ನಿನ್ನ ದನಿಯು ಎಷ್ಟು ಮಧುರ
    ಏನು ಹೇಳಲಿ!

ನಿನ್ನ ರೂಪ ಎನಿತು ಚೆಂದ
    ಹೇಗೆ ಹೊಗಳಲಿ!

ಹಲವು ಬಗೆಯ ಬಣ್ಣದಿಂದ
    ನಿನ್ನ ಗರಿಗಳು

ಮುತ್ತು ರತ್ನ ಹವಳದಂತೆ
    ಹೊಳೆಯುತಿರುವುವು
   
ನಿನ್ನ ಕಣ್ಣ ರೇಖೆ ಚೆನ್ನ
    ಚಿನ್ನದುಂಗುರ

ತಲೆಯ ಮೇಲೆ ತೆನೆ-ತುರಾಯಿ
    ಬಹಳ ಸುಂದರ

ಮೇಘಮಾಲೆ ತಿರುಗುತಿರಲು
    ಕೇಕೆ ಹಾಕುವೆ

ಮಣಿದು ಕುಣಿದು ಹರುಷದಿಂದ
    ಹಾಡ ಹಾಡುವೆ

ನಿನಗೆ ತಿನಲು ಕಾಳ ಕೊಡುವೆ
    ಬಾರೆ ಇಲ್ಲಿಗೆ

ಪ್ರೀತಿಯಿಂದ ಮುದ್ದನೊಂದ
    ಕೊಡುವೆ ಮೆಲ್ಲಗೆ

ನಿನಗೆ ಅಂದ ಚೆಂದದೊಂದು
    ಮನೆಯ ಕಟ್ಟುವೆ

ಪ್ರೇಮದಿಂದ ನಿನ್ನ ನಾನು
    ಸಾಕಿ ಸಲಹುವೆ

ನನ್ನ ನವಿಲೆ ನನ್ನ ನವಿಲೆ
    ಬಾರೆ ಇಲ್ಲಿಗೆ

ಅಂಕು ಡೊಂಕು ಹೆಜ್ಜೆ ಹಾಕಿ
    ಹೊರಟೆ ಎಲ್ಲಿಗೆ?

-ಅಣ್ಣಾರಾಯ ಸಾಲಿಮನಿ

 ಚಿತ್ರ ಬಿಡಿಸಿದ್ದು: ಪ್ರಸನ್ನ ಶಂಕರಪುರ

ಪದ್ಯ ಚೆಂದ ಇದೆ ಅಲ್ವಾ? ಬರೆದಿದ್ದು ಅಣ್ಣಾರಾಯ ಸಾಲಿಮನಿ ಅವರು. ಈ ಪದ್ಯ ನನಗೆ ಒಂದನೇ ತರಗತಿಯಲ್ಲಿತ್ತು. ಆಗ ನನಗಿದು ಅತ್ಯಂತ ಇಷ್ಟದ ಪದ್ಯವಾಗಿತ್ತು. ಆದರೆ ಓದಿ ಸುಮಾರು ವರ್ಷ ಆಯ್ತು ಅಲ್ವಾ? ಅದಕ್ಕೇ ಈಗ ಕೊನೆಯ ಕೆಲವು ಸಾಲುಗಳು ಮರೆತೇ ಹೋಗಿತ್ತು. ಮೊನ್ನೆ ಏನೋ ಹುಡುಕುತ್ತಿರುವಾಗ ಒಂದನೇ ಕ್ಲಾಸಿನ ಕನ್ನಡ ಪುಸ್ತಕ ಸಿಕ್ತು. ಅದ್ರಲ್ಲಿ ಈ ಪದ್ಯ ನೋಡಿ ಸಿಕ್ಕಾಪಟ್ಟೆ ಖುಷಿ ಆಯ್ತು. ನೀವೂ ಓದಿದರೆ ಖುಷಿ ಪಡ್ತೀರಿ ಅಂತ ಇಲ್ಲಿ ಹಾಕಿದೆ. ನಿಮ್ಮ ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದರೆ ಅವರಿಗೆ ಇದನ್ನು ಹೇಳಿಕೊಡ್ತೀರ ಅಲ್ವಾ? ಇಂತಹ ಸುಂದರ ಪದ್ಯವನ್ನು ಕೊಟ್ಟ ಅಣ್ಣಾರಾಯ ಸಾಲಿಮನಿ ಅವರಿಗೆ ನನ್ನ ಧನ್ಯವಾದ ಅರ್ಪಿಸುತ್ತಿದ್ದೇನೆ.

3 comments:

  1. ಹೌದು, ಹಾಡು ತುಂಬಾ ಚೆನ್ನಾಗಿದೆ.
    ಆದರೆ, ಅದರ ಮೂರನೇ ಸಾಲು:
    > ನಿನ್ನ ದನಿಯು ಎಷ್ಟು ಮಧುರ ಏನು ಹೇಳಲಿ!
    ನವಿಲಿನ ಧ್ವನಿಯೇನೂ ಅಷ್ಟು ಇಂಪಾಗಿರುವುದಿಲ್ಲ.
    ಹೀಗಾಗಿ, ನಾಟ್ಯಕ್ಕೆ ನವಿಲನ್ನು ಹೇಳಿದರೂ, ಇಂಪಿಗೆ ಕೋಗಿಲೆಯನ್ನೇ ಹೇಳುತ್ತಾರೆ.
    ಇಲ್ಲಿ, ಕವಿ ಅದ್ಯಾಕೋ ನವಿಲಿನ ಧ್ವನಿಯನ್ನೂ ಹೊಗಳಿದ್ದಾರೆ!

    ReplyDelete
  2. :-) yes! you are right..

    Thank you for your comment.. :)

    ReplyDelete
  3. ಒಂದನೇ ತರಗತಿಯ ಕನ್ನಡ ಪುಸ್ತಕದ ಕೊನೇಯ ಪದ್ಯ ಇದಾಗಿತ್ತು. ಇದರ ಮುಂಚೆ ಜಿ.ಪಿ. ರಾಜರತ್ನಂರವರ 'ಒಂದು ಕಾಡಿನ ಮಧ್ಯದೊಳಗೆ' ಪದ್ಯ ಇತ್ತು. ಇದು ನನ್ನ ಮರೆಯಲಾಗದ ನೆನಪು.

    ReplyDelete