Thursday, January 20, 2011

ತರ್ಲೆ ಸಂಚಿಕೆ.. ಪ್ರಶ್ನೆ-1

ನಿಮಗೆಲ್ಲಾ ತರ್ಲೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯೋಣ ಅಂತ ಅನಿಸಿತು. ಅದಕ್ಕೇ ಈ ಹೊಸ ಅಂಕಣ ಪ್ರಾರಂಭ ಮಾಡಿದ್ದೇನೆ. ನೀವು ಉತ್ರ ಹೇಳ್ತೀರ ಅಲ್ವಾ? ;-)

ತರ್ಲೆ ಪ್ರಶ್ನೆ 1: ಒಂದೂರಲ್ಲಿ ಒಬ್ಬ ಕಳ್ಳ ಇರ್ತಾನೆ. ಅವನು ಮಹಾನ್ ಚಾಣಾಕ್ಷ ಚೋರ. ಯಾವುದೇ ಸಣ್ಣ ಸುಳುಹನ್ನೂ ಬಿಡದಂತೆ ಕಳ್ಳತನ ಮಾಡ್ತಾ ಇರ್ತಾನೆ. ಹಾಗೆಯೇ ಕದ್ದ ವಸ್ತುಗಳನ್ನು ಯಾರಿಗೂ ಗೊತ್ತಾಗದ ಹಾಗೆ ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಕತ್ತಲೆ ಕೋಣೆಯಲ್ಲಿ ಬಚ್ಚಿಡುತ್ತಿರುತ್ತಾನೆ. ಒಂದು ರಾತ್ರಿ ಕಾವಲುಗಾರರು ನಿದ್ದೆ ಮಾಡುತ್ತಿರುವ ಸಮಯ ನೋಡಿ ಅರಮನೆಯ ತಿಜೋರಿಗೆ ಈತ ಕನ್ನ ಹಾಕ್ತಾನೆ. ಅಲ್ಲಿ ಅವನಿಗೆ ಅತ್ಯಂತ ಬೆಲೆಬಾಳುವ ಮೂರು ವಜ್ರ ಕಾಣುತ್ತದೆ. ಅದರಲ್ಲಿ ಒಂದು ಸಾಮಾನ್ಯ ವಜ್ರ, ಇನ್ನೊಂದು ಸ್ವಲ್ಪ ಕೆಂಪು ಬಣ್ಣದ ವಜ್ರ ಹಾಗೂ ಕೊನೆಯದು ನೀಲಿ ಬಣ್ಣದ ವಜ್ರ. ಸರಿ ಅಂತ ಆ ಮೂರೂ ವಜ್ರಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡ್ತಾನೆ. ಅರಮನೆಯಿಂದ ಕೊರಟವನೇ, ಸೀದಾ ಬಂದು ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಕತ್ತಲಕೋಣೆಯಲ್ಲಿ ಆ ವಜ್ರದ ಗಂಟನ್ನು ಇಟ್ಟು, ನಿದ್ದೆ ಮಾಡಲು ಹೋಗುತ್ತಾನೆ. ಆದರೆ ಆ ವಜ್ರಗಳು ಎಷ್ಟು ಬೆಲೆಬಾಳಬಹುದು, ಯಾವುದು ಹೆಚ್ಚು ಹೊಳೆಯಬಹುದು ಎಂದು ಯೋಚಿಸಲು ಶುರು ಮಾಡಿದ ಆತನಿಗೆ ಏನು ಮಾಡಿದರೂ ನಿದ್ದೆ ಬರೋಲ್ಲ. ಹಾಗಾಗಿ ಆತ ಎದ್ದು ಮತ್ತೆ ಆ ನೆಲಮಾಳಿಗೆಯ ಕೋಣೆಗೆ ಹೋಗುತ್ತಾನೆ. ಅಲ್ಲಿ ವಜ್ರಗಳಿರುವ ಬಟ್ಟೆಯ ಗಂಟನ್ನು ಬಿಚ್ಚಿ ನೋಡುತ್ತಾನೆ.

ಈಗ ಪ್ರಶ್ನೆ ಇರುವುದು ನಿಮಗೆ. "ಆ ಕಳ್ಳ ಬಟ್ಟೆಯ ಗಂಟನ್ನು ತೆಗೆದು ನೋಡಿದಾಗ ಯಾವ ಬಣ್ಣದ ವಜ್ರ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ? ಮತ್ತು ಅದಕ್ಕೆ ಕಾರಣವೇನು? ಉತ್ತರ ಹೇಳ್ತೀರ ಅಲ್ವಾ?

ಸರಿಯಾದ ಉತ್ತರ ಮುಂದಿನ ಸಂಚಿಕೆಯಲ್ಲಿ...

[ಈ ಕಥೆ ಸಂಪೂರ್ಣವಾಗಿ ನಾನು ಬರೆದದ್ದು, ಎಲ್ಲಿಂದಲೂ ಕದ್ದಿಲ್ಲ.. :-)  ]

6 Comments:

B.B said...

ಅವನು ಲೈಟ್ ಹಾಕೊಂಡಿದ್ನ?

Prasanna S P said...

ಅದನ್ನು ಹೇಳಿದರೆ ಉತ್ತರವನ್ನೂ ಹೇಳಿದಂತೆಯೇ! (ಮೇಲಿನಿಂದ ಕೆಳಗೆ ಇನ್ನೊಮ್ಮೆ ಓದಿ, ಸುಳುಹು ಅಲ್ಲೇ ಇದೆ!) :-)

ಮಂಜುಳಾದೇವಿ said...

ಪ್ರಸನ್ನರವರೆ,
ಹೊಳೆಯುವುದು ಸಾಮಾನ್ಯ ವಜ್ರ.
ವಜ್ರ ಕೆಂಪು,ನೀಲಿ ಇರೋಲ್ಲ. ಅವು ಬರೀ ಹರಳುಗಳಿರಬಹುದು

Narendra Kumar said...

ಕತ್ತಲಿನಲ್ಲಿ ವಜ್ರ ಹೊಳೆಯುವುದಿಲ್ಲ:)

ಮನಮುಕ್ತಾ said...

ಸ್ವ೦ತ ಬೆಳಕಿರುವ ವಸ್ತುಗಳನ್ನು ಬಿಟ್ಟು, ಕತ್ತಲೆಯಲ್ಲಿ ಏನೂ ಕಾಣಿಸದು. ವಜ್ರದ ಮೇಲೆ ಬೆಳಕು ಬಿದ್ದಾಗ ಮಾತ್ರಾ ಅದು ಹೊಳೆಯ ಬಲ್ಲದು. ಹಾಗಾಗಿ ನರೇ೦ದ್ರ ಅವರ ಉತ್ತರ ಸರಿ ಎನ್ನಿಸುತ್ತದೆ.

Prasanna S P said...

ಮುಂದಿನ ತರ್ಲೆ ಸಂಚಿಕೆ ಬರುವುದು ಸ್ವಲ್ಪ ತಡವಾಗಬಹುದು, ಅದಕ್ಕೆ ಇಲ್ಲೇ ಉತ್ತರ ಹೇಳುತ್ತೇನೆ,

ಆ ಕಳ್ಳ ನೋಡಿದಾಗ ಯಾವ ವಜ್ರವೂ ಹೊಳೆಯುತ್ತಿರುವುದಿಲ್ಲ, ಏಕೆಂದರೆ ಬೆಳಕು ವಜ್ರವನ್ನು ಪ್ರವೇಶಿಸಿ ಸಂಪೂರ್ಣ ಆಂತರಿಕ ಪ್ರತಿಫಲನ ಹೊಂದಿ ಹೊರಬಂದಾಗ ಮಾತ್ರ, ವಜ್ರ ಹೊಳೆದಂತೆ ಭಾಸವಾಗುತ್ತದೆ. ಕತ್ತಲೆಯಲ್ಲಿ ಯಾವ ವಜ್ರವೂ ಹೊಳೆಯುವುದಿಲ್ಲ!

ಸರಿ ಉತ್ತರ ಹೇಳಿದ, ಉತ್ತರಿಸಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳು.. :-)

Post a Comment